ಜಿಲ್ಲೆಗೆ ಬಂತು 4 ಸಾವಿರ ಡೋಸ್

14-hvr-01a
Published on

ಹಾವೇರಿ: ಜಿಲ್ಲೆಯ ಕರೊನಾ ಸೇನಾನಿಗಳಿಗೆ ಜ. 16ರಿಂದ ಮೊದಲ ಸುತ್ತಿನ ಕೋವಿಡ್ ಲಸಿಕೆ ನೀಡಲಾಗುವುದು. ಮೊದಲ ಹಂತದಲ್ಲಿ ಜಿಲ್ಲೆಗೆ ನಾಲ್ಕು ಸಾವಿರ ಲಸಿಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

ಬೆಳಗಾವಿಯ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಬುಧವಾರ ರಾತ್ರಿ ಜಿಲ್ಲೆಗೆ ಬಂದ 4 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿ ಅವರು ಮಾಹಿತಿ ನೀಡಿದರು. ಈಗಾಗಲೇ ನೋಂದಾಯಿತ ಆರೋಗ್ಯ, ಅಂಗನವಾಡಿ ಕಾರ್ಯಕರ್ತರು ಹಾಗೂ ಡಿ ಗ್ರೂಪ್ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ವ್ಯಾಕ್ಸಿನ್ ಪಡೆಯಲು ಐಡಿ ಕಾರ್ಡ್ ಕಡ್ಡಾಯ ಎಂದರು.

ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ ಮಾತನಾಡಿ, ಜಿಲ್ಲೆಯಲ್ಲಿ 46 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಜ. 16ರಿಂದ 18ರವರೆಗೆ ಬ್ಯಾಡಗಿ ತಾಲೂಕಿನ ಬ್ಯಾಡಗಿ, ಕಾಗಿನೆಲೆ, ಕದರಮಂಡಲಗಿ, ಶಂಕ್ರಿಕೊಪ್ಪ ಹಾಗೂ ಚಿಕ್ಕಕಬ್ಬಾರ, ಹಾನಗಲ್ಲ ತಾಲೂಕಿನ ಹಾನಗಲ್ಲ, ಅಕ್ಕಿಆಲೂರ, ಕುಸನೂರ, ಹಿರೇಕೆರೂರು ತಾಲೂಕಿನ ಹಿರೇಕೆರೂರು, ರಟ್ಟಿಹಳ್ಳಿ, ಮಾಸೂರು, ಕೋಡ, ಚಿಕ್ಕೇರೂರು, ತಡಕನಹಳ್ಳಿ ಹಾಗೂ ಕುಡಪಲಿ, ಸವಣೂರ ತಾಲೂಕಿನ ಸವಣೂರ ಸಾರ್ವಜನಿಕ ಆಸ್ಪತ್ರೆ, ಉಪ ಆರೋಗ್ಯ ಕೇಂದ್ರ ಮತ್ತು ಹತ್ತಿಮತ್ತೂರು, ಶಿಗ್ಗಾಂವಿ ತಾಲೂಕಿನ ಶಿಗ್ಗಾಂವಿ, ಬಂಕಾಪುರ, ತಡಸ, ದುಂಡಸಿ, ಅತ್ತಿಗೇರಿ ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯಲಿದೆ.

ಹಾವೇರಿ ತಾಲೂಕಿನ ಹಾವೇರಿ, ಗುತ್ತಲ, ಅಗಡಿ, ದೇವಗಿರಿ, ಕರ್ಜಗಿ, ದೇವಿಹೊಸೂರು, ಹಾವನೂರು, ಕಾಟೇನಹಳ್ಳಿ, ಕುರುಬಗೊಂಡ, ಹಂದಿಗನೂರು, ಹೊಸರಿತ್ತಿ, ನೆಗಳೂರು ಹಾಗೂ ಕಬ್ಬೂರ ಆರೋಗ್ಯ ಕೇಂದ್ರಗಳಲ್ಲಿ ಜ. 16, 18, 19 ಹಾಗೂ 20ರವರೆಗೆ ನಡೆಯಲಿದೆ. ರಾಣೆಬೆನ್ನೂರ ತಾಲೂಕಿನ ರಾಣೆಬೆನ್ನೂರ, ಮೆಡ್ಲೇರಿ, ಹಲಗೇರಿ, ಸುಣಕಲ್ಲಬಿದರಿ, ಹೊನ್ನತ್ತಿ, ಮಾಕನೂರು ಆರೋಗ್ಯ ಕೇಂದ್ರಗಳಲ್ಲಿ ಜ. 18, 20 ಹಾಗೂ 22ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ ಇತರರಿದ್ದರು.

ಲಸಿಕಾ ಕೇಂದ್ರಗಳಲ್ಲಿ ಇಂಟರ್​ನೆಟ್ ಸ್ಥಗಿತಗೊಳ್ಳದಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಕೋವಿಡ್ ಲಸಿಕೆಗೆ ಉಪಯೋಗಿಸಿದ ತ್ಯಾಜ್ಯವನ್ನು ಸರಿಯಾಗಿ ಶೇಖರಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. | ಮಹಮ್ಮದ ರೋಶನ್ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net