

ಹಾಸನ: ಹಾಸನ ಜಿಲ್ಲೆಗೆ ಕಾಂಗ್ರೆಸ್ ನೀಡಿರುವ ಕೊಡುಗೆಗಳಾದರೂ ಏನು? ಸರ್ಕಾರ ಬಂದು 9 ತಿಂಗಳಾಯಿತು. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಕೊರೆಸಿರುವ ಕೊಳವೆಬಾವಿಗಳಿಗೆ ವಿದ್ಯುತ್ ಕೊಡಲು ಇವರ ಕೈಯಲ್ಲಿ ಆಗಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದ ಖಾಸಗಿ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 3 ಸಾವಿರ ದಲಿತ ಸಮುದಾಯದ ಜನರಿಗೆ ಕೊಳವೆ ಬಾವಿ ಕೊರೆಸಿ, ಅದಕ್ಕೆ ಪಂಪ್ ಸೆಟ್ ಕೂಡ ಕೊಡಿಸಿದ್ದೇನೆ. ಅವುಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕೊಡಲು ಇವರಿಗೆ ಸಾಧ್ಯವಾಗಿಲ್ಲ. ಹಾಗೆಯೇ 20 ಸಾವಿರ ಜನರು ಟಿಸಿಗಾಗಿ ದುಡ್ಡು ಕಟ್ಟಿದ್ದಾರೆ. ಅವರಿಗೂ ಟಿಸಿ ನೀಡಿಲ್ಲ. ಒಂದೇ ಒಂದು ಅಂಬೇಡ್ಕರ್ ಭವನ ನಿರ್ಮಾಣಿಕ್ಕೆ ದುಡ್ಡು ಕೊಟ್ಟಿದ್ದಾರಾ? ಹಾಸನ ಹಾಗೂ ಹೊಳೆನರಸೀಪುರ ಭವನ ನಿರ್ಮಾಣ ಮಾಡಿದ್ದು ನಾವು ಎಂದು ಹೇಳಿದರು.
ಕಾಂಗ್ರೆಸ್‌ಗೆ ಚುನಾವಣೆ ಬಂದಾಗ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ನೆನಪಾಗುತ್ತಾರೆ. ಆದರೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ದೇವೇಗೌಡರೇ ಬರಬೇಕಾಯಿತು. ಜಿಲ್ಲೆಯಲ್ಲಿ ಒಬ್ಬ ದಲಿತ ರಾಜಕಾರಣಿಗೆ ಅಧಿಕಾರವನ್ನು ಕಾಂಗ್ರೆಸ್ ನೀಡಿದ್ಯಾ? ದೇವೇಗೌಡರು ಕೊಟ್ಟಿದ್ದಾರೆ. ಸಚಿವರಾನ್ನಾಗಿ ಮಾಡಿದ್ದಾರೆ, ಜಿಲ್ಲಾ ಪಂಚಾಯಿತಿ, ನಗರಸಭೆ, ನಿಗಮ ಮಂಡಳಿ ಹಾಗೂ ಸಚಿವರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ದೇವೇಗೌಡರ 60 ವರ್ಷ ರಾಜಕೀಯದಲ್ಲಿ ಜೀವನದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳನ್ನು ನೋಡಿದ್ದಾರೆ. ಹಳೇ ಕಾಂಗ್ರೆಸ್ ಈಗ ಇಲ್ಲ. ಈಗ ಇರುವುದು ವಿರೋಧ ಪಕ್ಷಗಳನ್ನು ತುಳಿಯುವ ಕಾಂಗ್ರೆಸ್. ಅಧಿಕಾರ ಇಲ್ಲದಿದ್ದಾಗ ಕೋಮುವಾದಿಗಳನ್ನು ದೂರ ಇಡಬೇಕು ಎಂದು ಹೇಳುತ್ತಾರೆ. ಅಧಿಕಾರ ಬಂದಾಗ ನಮ್ಮನ್ನು ತುಳಿಯುತ್ತಾರೆ. ದೇವೇಗೌಡರನ್ನು ಕೇವಲ 11 ತಿಂಗಳಿಗೆ ಅಧಿಕಾರದಿಂದ ಕೆಳಗೆ ಇಳಿಸಿದರು. ದೇವೇಗೌಡರು ಈ ಅಲ್ಪ ಅವಧಿಯಲ್ಲಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರ ಎಂದರು.
ರಾಜ್ಯದಲ್ಲಿ ಎನ್‌ಡಿಎ ಅತೀ ಹೆಚ್ಚಿನ ಸ್ಥಾನಗಳನ್ನು ಗೆದ್ದು ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಉದ್ದೇಶ ದೇವೇಗೌಡರಿಗೆ ಇದೆ. ಮೈತ್ರಿಯಲ್ಲಿ ನಮಗೆ ಸೀಟು ಮುಖ್ಯವಲ್ಲ. ಮೋದಿ ಅವರು ನಮಗೆ ಗೌರವ ಕೊಡುತ್ತಾರೆ. ಹಾಗಾಗಿ ಮೋದಿ ಅವರ ಜತೆಗೆ ಇದ್ದೇವೆ. ಇಂದು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ಬರಲು ಮೋದಿ ಅವರೇ ಕಾರಣ ಎಂದರು.
ಹುಡಾ ಅಧ್ಯಕ್ಷ ಸ್ಥಾನ ಹರಾಜು:
ಹುಡಾ ಅಧ್ಯಕ್ಷ ಸ್ಥಾನವನ್ನು ಸರ್ಕಾರ ಹರಾಜಿಗೆ ಇರಿಸಿದೆ. ಯಾರು ಹೆಚ್ಚು ಕೊಡುತ್ತಾರೋ ಅವರಿಗೆ ಅಧ್ಯಕ್ಷಗಿರಿ ಕೊಡುತ್ತಾರೆ. 5, 6, 7, 10 ಹೀಗೆ ಏರಿಕೆ ಮಾಡಲಾಗುತ್ತಿದೆ. ಅದು ಲಕ್ಷವೋ, ಕೋಟಿಯೋ ಗೊತ್ತಿಲ್ಲ ಎಂದ ರೇವಣ್ಣ ಅವರು, ಇಂದು ಕಾಂಗ್ರೆಸ್ ಜಿಲ್ಲೆಗೆ ಮೋಸ ಮಾಡುತ್ತಿದೆ. ತುಮಕೂರಿಗೆ ನೀರು ಕೊಡುವ ಸಲುವಾಗಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಿಷೇಧಾಜ್ಞೆ ಜಾರಿ ಮಾಡಿ ನಾಲೆಯ ಬಳಿ ಪೊಲೀಸ್ ಬಂದೋಬಸ್ತ್ ಮಾಡಿ ನೀರು ಹರಿಸುತ್ತಿದ್ದಾರೆ. ಅವರಿಗೂ ನೀರು ಬಿಟ್ಟಂತೆ ನಮಗೂ ನೀರು ಕೊಡಿ ಎಂದು ಕೇಳಿದರು.
ಪ್ರಚಾರಕ್ಕೆ ಯಡಿಯೂರಪ್ಪ ಬರಲಿದ್ದಾರೆ:
ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮೌನ್ನೆಯಷ್ಟೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದೇವೆ. ಜಿಲ್ಲೆಗೆ ಎರಡು ಬಾರಿ ಬಂದು ಪ್ರಜ್ವಲ್ ಪರವಾಗಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿ ಆಶೀರ್ವದಿಸಿದ್ದಾರೆ. ಅಧಿಕೃತವಾಗಿ ಮೈತ್ರಿ ಅಭ್ಯರ್ಥಿ ಘೋಷಣೆಯಾದ ಬಳಿಕ ಜಿಲ್ಲೆಯ ಬಿಜೆಪಿ ಮುಖಂಡರನ್ನು ಕರೆದು ಮಾತನಾಡುವುದಾಗಿ ಹೇಳಿದ್ದಾರೆ ಎಂದು ರೇವಣ್ಣ ಹೇಳಿದರು.