

ಗದಗ :ಜಿಲ್ಲೆಯಲ್ಲಿ ಕರೊನಾ ತೀವ್ರ ಆತಂಕ ಸೃಷ್ಟಿ ಮಾಡಿದ್ದು ಶುಕ್ರವಾರ ಮತ್ತೆ 12 ಜನರಿಗೆ ಸೋಂಕು ವಕ್ಕರಿಸಿದೆ. ಕಳೆದ ಏಳು ದಿನದ ಅವಧಿಯಲ್ಲಿ 56 ಜನರಿಗೆ ಸೋಂಕು ತಗುಲಿ ಅಟ್ಟಹಾಸ ಮೆರೆಯತೊಡಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 116 ಸೋಂಕು ದೃಢಪಟ್ಟಿದ್ದು, ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಪುರುಷನ (ಪಿ-9407) ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದ ಮತ್ತೆ 4 ಜನಕ್ಕೆ ಸೋಂಕು ದೃಢಪಟ್ಟಿದೆ. ಮುಂಡರಗಿ ಪಟ್ಟಣದ ಹುಡ್ಕೊ ಕಾಲನಿಯ 13 ವರ್ಷದ ಬಾಲಕ, 25 ವರ್ಷದ ಪುರುಷ, ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಇಬ್ಬರಿಗೆ 26 ವರ್ಷದ ಪುರುಷ ಹಾಗೂ 27 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾ ನಿವಾಸಿ 29 ವರ್ಷದ ಸೋಂಕಿತ ಮಹಿಳೆಯ ಸಂಪರ್ಕದಿಂದ ಮತ್ತಿಬ್ಬರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಶಿರಹಟ್ಟಿ ಪಟ್ಟಣದ 30 ವರ್ಷದ ಪುರುಷ ಪಿ-8724 ಸಂಪರ್ಕದಿಂದ ಶಿರಹಟ್ಟಿ ಪಟ್ಟಣದ ಮ್ಯಾಗೇರಿ ಓಣಿಯ 26 ವರ್ಷದ ಪುರುಷ ಹಾಗೂ ಅಹಮದಾಬಾದ್ದಿಂದ ಆಗಮಿಸಿದ್ದ ಶಿರಹಟ್ಟಿ ಪಟ್ಟಣದ 22 ವರ್ಷದ ವಿದ್ಯಾರ್ಥಿನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಗದಗ ನಗರದ ಸೆಟಲ್ವೆುಂಟ್ ಪ್ರದೇಶದ 26 ವರ್ಷದ ಮಹಿಳೆ, ಹರ್ತಿ ಗ್ರಾಮದ 40 ವರ್ಷದ ಪುರುಷ, ಯಲಿಶಿರುಂದ ಗ್ರಾಮದ 80 ವರ್ಷದ ಮಹಿಳೆ ಹಾಗೂ ಮಲ್ಲಸಮುದ್ರ ಗ್ರಾಮದ 19 ವರ್ಷದ ಯುವಕನಿಗೆ ಸೋಂಕು ಇರುವುದು ದೃಢವಾಗಿದೆ. ಸದ್ಯ ಸೋಂಕಿತರೆಲ್ಲರೂ ಜಿಮ್್ಸ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಚಿಂತೆ ಹೆಚ್ಚಿಸಿದ ನೀರಾ‘ವರಿ’ ಇಲಾಖೆ ನೌಕರ
ಮುಂಡರಗಿ: ಪಟ್ಟಣದ ಸಿಂಗಟಾಲೂರ ಏತ ನೀರಾವರಿ ಇಲಾಖೆಯ ಕರೊನಾ ಸೋಂಕಿತ ಸಿಬ್ಬಂದಿಯ ಸಂಪರ್ಕದಲ್ಲಿದ್ದ 4 ಜನರಿಗೆ ಶುಕ್ರವಾರ ಕರೊನಾ ಸೋಂಕು ದೃಢಪಟ್ಟಿದೆ. ಪಟ್ಟಣದ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೋಣ ತಾಲೂಕಿನ ಇಟಗಿ ಗ್ರಾಮದ ಸಿಬ್ಬಂದಿಗೆ ಕರೊನಾ ದೃಢಪಟ್ಟಿತ್ತು. ಅವರ ಸಂಪರ್ಕಕ್ಕೆ ಬಂದಿದ್ದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಡ್ಕೊ ಕಾಲನಿಯ ನೀರಾವರಿ ಇಲಾಖೆ ವಸತಿ ಗೃಹದಲ್ಲಿ ವಾಸವಿರುವ ಇಬ್ಬರಿಗೆ ಮತ್ತು ತಾಲೂಕಿನ ಡಂಬಳ ಗ್ರಾಮದ ಸಮೀಪದಲ್ಲಿ ನೀರಾವರಿ ಇಲಾಖೆಯ ಹನಿ ನೀರಾವರಿ ಕಾಮಗಾರಿ ಕೈಗೊಂಡಿರುವ ಕ್ಯಾಂಪ್ನಲ್ಲಿ ಇಬ್ಬರಿಗೆ ಸೋಂಕು ದೃಢ ಪಟ್ಟಿದೆ. ಕರೊನಾ ಪ್ರಕರಣ ಪತ್ತೆಯಾದ ಭಾಗದಲ್ಲಿ ತಾಲೂಕು ಆಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಶಿರಹಟ್ಟಿಯಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್
ಶಿರಹಟ್ಟಿ :ಪಟ್ಟಣದಲ್ಲಿ ಶುಕ್ರವಾರ ಮತ್ತೆ 4 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ತಾಕೂಕಿನಲ್ಲಿ ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಜಿಮ್್ಸ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದ ಪಟ್ಟಣದ 23 ಹಾಗೂ 25 ವರ್ಷದ ಇಬ್ಬರು ನರ್ಸ್ಗಳಿಗೆ ಸೋಂಕು ದೃಢಪಟ್ಟಿದೆ. ಸ್ಥಳೀಯ ಆಸ್ಪತ್ರೆಯ 26 ವರ್ಷದ ವೈದ್ಯನಿಗೆ ವೈರಸ್ ತಗುಲಿದೆ.
ಈ ಮೊದಲು ಸೋಂಕು ತಗುಲಿದ್ದ ಪಟ್ಟಣದ ಮಟ್ಟಿಬಾವಿ ಪ್ಲಾಟ್ ನಿವಾಸಿ 34 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆತನಿಂದಲೇ ಆ ಆಸ್ಪತ್ರೆ ವೈದ್ಯನಿಗೆ ಸೋಂಕು ತಗುಲಿದೆ.
ಇನ್ನು ಇಂಜಿನಿಯರಿಂಗ್ ಓದುತ್ತಿದ್ದ ಪಟ್ಟಣದ 22 ವರ್ಷದ ವಿದ್ಯಾರ್ಥಿನಿ ಇಸ್ರೋ ಪ್ರೊಜೆಕ್ಟ್ ಸಂಬಂಧ 6 ತಿಂಗಳ ಕಾಲ ಅಹಮದಾಬಾದ್ನಲ್ಲಿದ್ದು ಬಂದಿದ್ದಳು. ಆಕೆಯ ಗಂಟಲ ದ್ರವದ ಪರೀಕ್ಷೆ ನಡೆಸಿದಾಗ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಾಲ್ವರನ್ನು ಗದಗನ ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪ್ರಥಮ ಸಂಪರ್ಕದಲ್ಲಿದ್ದ 7 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಂಕಿತರು ವಾಸವಿದ್ದ ಪಟ್ಟಣದ ಪೇಟೆ ರಸ್ತೆ, ಮಹಿಷಿ ಓಣಿ, ಮ್ಯಾಗೇರಿ ಓಣಿ ಹಾಗೂ ಮಾರುತಿ ದೇವಸ್ಥಾನ ಬಳಿ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೊಷಿಸಿ ಸೀಲ್ಡೌನ್ ಮಾಡಲಾಗಿದೆ ಎಂದು ತಾಲೂಕು ಆಸ್ಪತ್ರೆ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ತಿಳಿಸಿದ್ದಾರೆ.