

ಹಾಸನ : ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ಈಗಾಗಲೇ ಜಿಲ್ಲೆಗೆ 7 ಅರೆಮಿಲಿಟರಿ ಪಡೆ ನಿಯೋಜಿಸಲಾಗಿದೆ. ಇದರಲ್ಲಿ ಹಾಸನಕ್ಕೆ ಎರಡು ತಂಡ ಹಾಗೂ ಶ್ರವಣಬೆಳಗೊಳ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ಬಾರಿ ವಿಧಾನಸಭಾ ಚುನಾವಣೆಗೆ 25 ತುಕುಡಿಗಳನ್ನು ಜಿಲ್ಲೆಗೆ ನಿಯೋಜಿಸುವಂತೆ ಮನವಿ ಮಾಡಲಾಗಿದೆ. ಮೊದಲ ಹಂತದಲ್ಲಿ ಏಳು ತಂಡಗಳು ಆಗಮಿಸಿದೆ. ಉಳಿದ ತಂಡಗಳು ಬಂದ ಮೇಲೆ ಚನ್ನರಾಯಪಟ್ಟಣ ಸೇರಿದಂತೆ ಉಳಿದ ಕ್ಷೇತ್ರಗಳಿಗೂ ಕೂಡ ವಿಂಗಡಿಸಲಾಗುವುದು ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಹಾಸನ ಜಿಲ್ಲೆಗೆ 20 ಅರೆಮಿಲಿಟರಿ ಪಡೆಗಳು ಆಗಮಿಸಿದ್ದವು. ಈ ಬಾರಿ ಇನ್ನು ಐದು ಹೆಚ್ಚಿಗೆ ತಂಡಗಳನ್ನು ನಿಯೋಜಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾದ್ಯಂತ 75 ಲಕ್ಷ ರೂ. ವಶ!
ಜಿಲ್ಲೆಯಾದ್ಯಂತ ಈಗಾಗಲೇ 33 ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಅಕ್ರಮವಾಗಿ ಹಣ ಹಾಗೂ ವಸ್ತುಗಳ ಸಂಗ್ರಹಣೆ ಬಗ್ಗೆ ತೀವ್ರ ತಪಾಸಣೆ ನಡೆಯುತ್ತಿದೆ. ಇದರ ಜತೆಗೆ ಈಗಾಗಲೇ ವಸತಿಗೃಹಗಳು ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿ, ಅಕ್ರಮ ಹಣ, ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಇದಲ್ಲದೆ ಪ್ರತಿನಿತ್ಯವೂ ಕೂಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಣ ಮತ್ತು ವಸ್ತುಗಳ ಸಾಗಣೆ ಬಗ್ಗೆ ಹೆಚ್ಚಿನ ನಿಗಾ ಇಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಸೂಚನೆ ಮೇರೆಗೆ ಚುನಾವಣೆ ಘೋಷಣೆಗಿಂತ ಮುಂಚಿತವಾಗಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 75 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕೂಡ ಸಿಜ್ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಸುಮಾರು 450 ಲೀಟರ್ ಮದ್ಯವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.