ಜಿಲ್ಲಾಸ್ಪತ್ರೆಯೊಳಗೆ ನಿರ್ಮಿಸಿದರೆ ಕಾನೂನು ಹೋರಾಟ

Marularadhya
Published on

ಚಿತ್ರದುರ್ಗ: ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಜಿಲ್ಲಾಸ್ಪತ್ರೆ ಆವರಣದೊಳಗೆ ನಿರ್ಮಿಸಲು ಮುಂದಾದರೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಹೋರಾಟ ನಡೆಸಲಾಗುವುದು ಎಂದು ಡಿಸಿಸಿ ಕಾರ್ಯದರ್ಶಿ ಎ.ಮರುಳಾರಾಧ್ಯ ಎಚ್ಚರಿಸಿದರು.


ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಸ್ಪತ್ರೆಗೆ ನಿತ್ಯ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನ ಜನಸಂದಣಿ, ವಾಹನಗಳ ಸಂಚಾರದಿಂದಾಗಿ ಈಗಲೇ ಕಿರಿಕಿರಿ ಸೃಷ್ಟಿಯಾಗಿದೆ. ಜತೆಗೆ ವೈದ್ಯಕೀಯ ಕಾಲೇಜು ಇಲ್ಲಿಯೇ ನಿರ್ಮಿಸಿದರೆ, ನೂಕುನುಗ್ಗಲು ಸೃಷ್ಟಿಯಾಗಿ ಸಂಚರಿಸಲು ಎಲ್ಲರಿಗೂ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ವೈದ್ಯಕೀಯ ಕಾಲೇಜು ನಿರ್ಮಾಣ ಸಂತೋಷದ ಸಂಗತಿ. ಆದರೆ, ನಿರ್ಮಿಸಲು ಉದ್ದೇಶಿಸಿರುವ ಜಮೀನಿನ ಮೇಲೆ ತಕರಾರು ಇದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಸೂಕ್ತವಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ, ಆಟದ ಮೈದಾನ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಿದೆ ಎಂದರು.


ಮುಂದಿನ 5 ವರ್ಷಗಳಲ್ಲಿ ಚಿತ್ರದುರ್ಗದ ಕಾಲೇಜಿನಲ್ಲಿ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸಾಧ್ಯತೆ ಇದೆ. ಅದರಲ್ಲಿ ಬಡ ವಿದ್ಯಾರ್ಥಿಗಳು ಇರಲಿದ್ದಾರೆ. ಒಂದು ವೇಳೆ ತರಾತುರಿಯಲ್ಲಿ ಆವರಣದ ಹಿಂಬದಿ ನಿರ್ಮಿಸಿದರೆ, ಆಗುವ ಅನನುಕೂಲ ಊಹಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ ಎಂದು ಹೇಳಿದರು.


ವಿಶಾಲವಾದ ಸ್ಥಳದಲ್ಲೇ ವೈದ್ಯಕೀಯ ಕಾಲೇಜು ನಿರ್ಮಿಸಬೇಕು. ಯಾವ ಕಾರಣಕ್ಕೂ ಜಿಲ್ಲಾಸ್ಪತ್ರೆ ಆವರಣ ಸೂಕ್ತವಲ್ಲ. ದೂರದೃಷ್ಟಿ ಇಟ್ಟುಕೊಂಡು ಮುಂದಿನ ಪೀಳಿಗೆಗೂ ಅನುಕೂಲವಾಗುವಂತೆ ಸುಸಜ್ಜಿತವಾಗಿ, ಅತ್ಯಾಧುನಿಕವಾಗಿ ನಿರ್ಮಿಸಬೇಕು. ಜಿಲ್ಲೆಯ ಜನರಿಗೆ ಅನುಕೂಲವಾಗಬೇಕು. ಈ ಕುರಿತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಸಂಪರ್ಕಿಸಿದ್ದು, ಸಹಕರಿಸುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಈ ಕುರಿತು ಮರುಪರಿಶೀಲಿಸಬೇಕು ಎಂದು ಕೋರಿದರು.


ಡಿಸಿಸಿ ಕಾರ್ಯದರ್ಶಿ ಶಬ್ಬೀರ್ ಬಾಷಾ, ಎಸ್ಟಿ ಮೋರ್ಚಾ ರಾಜ್ಯ ಸದಸ್ಯ ಬಚ್ಚಬೋರನಹಟ್ಟಿ ಬಸವರಾಜ್, ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಎಲ್.ಬಸವರಾಜ್, ಕಾರ್ಮಿಕ ವಿಭಾಗದ ಮಾಜಿ ಕಾರ್ಯದರ್ಶಿ ನೂರುಲ್ಲಾ, ಕಲ್ಯಾಣ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net