

ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ನಿಯೋಜಿತರಾಗಿರುವ ಪಿಜಿ ಕೋರ್ಸ್ ಮೆಡಿಕಲ್ ವಿದ್ಯಾರ್ಥಿಗಳು, ಆಸ್ಪತ್ರೆಗೆ ಸರಿಯಾಗಿ ಹಾಜರಾಗದೆ ಡ್ಯೂಟಿ ಡಾಕ್ಟರ್‌ಗಳ ವಿರುದ್ಧವೇ ಸೆಡ್ಡು ಹೊಡೆಯುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಸಂಸದ ಗೋವಿಂದ ಎ.ಕಾರಜೋಳ ಜಿಲ್ಲಾಸ್ಪತ್ರೆಗೆ ಶುಕ್ರವಾರ ಬೆಳಗ್ಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ನಾನಾ ತಜ್ಞ ವೈದ್ಯರು, ಪಿಜಿ ವಿದ್ಯಾರ್ಥಿಗಳ ಉದ್ಧಟತನದ ನಡವಳಿಕೆಯನ್ನು ಅನಾವರಣಗೊಳಿಸಿದರು.
ಆಸ್ಪತ್ರೆಯ 8 ಮಂಜೂರು ಸಿಎಂಒ ಹುದ್ದೆಗಳ ಪೈಕಿ ಒಂದು ಭರ್ತಿ ಇದೆ. ಆದ್ದರಿಂದ ತಜ್ಞರ ವೈದ್ಯರೇ ಸಿಎಂಒ ಹುದ್ದೆಗಳನ್ನು ಪಾಳಿಯಂತೆ ನಿಬಾಯಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಎಂಎಲ್‌ಸಿ ಕೇಸ್ ಹಾಗೂ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಹಳಷ್ಟು ಸಮಸ್ಯೆ ಆಗುತ್ತಿದೆ. ನಿತ್ಯ 300 ಒಪಿಡಿ, 50 ಅಡ್ಮಿಷನ್ ಹಾಗೂ 20-30 ಎಂಎಲ್‌ಸಿ ಕೇಸ್‌ಗಳಿರುತ್ತವೆ. ಸೂಕ್ತ ಚಿಕಿತ್ಸೆ ಸಿಗಬೇಕೆಂಬ ಕೇಂದ್ರ ಸರ್ಕಾರದ ಆಶಯದಂತೆ ಡಿಪ್ಲೊಮ್ಯಾಟ್ ಆಫ್ ನ್ಯಾಷನಲ್ ಬೋರ್ಡ್‌ನಿಂದ 30 ಪಿಜಿ ವಿದ್ಯಾರ್ಥಿಗಳನ್ನು ಪ್ರತಿ ಜಿಲ್ಲಾಸ್ಪತ್ರೆಗೆ ನಿಯೋಜಿಸಿರುತ್ತದೆ. ಆದರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆ ವಿದ್ಯಾರ್ಥಿಗಳು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನಮ್ಮೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ, ಕೆಲವರು ಹಲ್ಲೆಗೂ ಮುಂದಾಗಿದ್ದಿದೆ ಎಂದು ವೈದ್ಯರು ಆರೋಪಿಸಿದರು.
ಗ್ರೂಪ್ ಡಿ ಸಿಬ್ಬಂದಿ, ವಾಚ್‌ಮೆನ್‌ಗಳು ಹೊಲಿಗೆ ಹಾಕುತ್ತಾರೆ, ಡ್ರಿಪ್ ಹಾಕುತ್ತಾರೆಂಬ ದೂರಿದೆ. ಆದರೆ, ಪಿಜಿ ವಿದ್ಯಾರ್ಥಿಗಳು ನಮ್ಮೊಂದಿಗೆ ಕೈ ಜೋಡಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ, ಅವರು ಸಹಕಾರ ನೀಡುತ್ತಿಲ್ಲ ಎಂದರು.
ಅಹವಾಲು ಆಲಿಸಿದ ಸಂಸದರು, ಶ್ರೀಮಂತರ ಮಕ್ಕಳ ಆಟವಿದು. ಉದ್ಧಟತನ ತೋರುವವರನ್ನು ಹಿಂದಕ್ಕೆ ಕಳುಹಿಸಿ, ಪ್ರಮಾಣ ಪತ್ರವನ್ನೂ ಕೊಡಬೇಡಿ. ಅಗತ್ಯ ಬಿದ್ದರೆ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸಿ. ಜತೆಗೆ ಗುಂಪುಗಾರಿಕೆಗೆ ಅವಕಾಶ ನೀಡಬೇಡಿ ಎಂದು ಆರ್‌ಎಂಒ ಡಾ.ಆನಂದ ಪ್ರಕಾಶ್‌ಗೆ ತಾಕೀತು ಮಾಡಿದರು.
ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ರೋಗಿಗಳಿರುವ ಜಿಲ್ಲಾಸ್ಪತ್ರೆಯನ್ನು ನಾನು ನೋಡಿಲ್ಲ. ಈ ಜಿಲ್ಲೆಯ ಶೇ.80 ಬಡವರು, ಕೆಳ ವರ್ಗದವರಿಗೆ ಈ ಆಸ್ಪತ್ರೆಯೇ ಆಸರೆ. ಔಷಧ ಕೊರತೆ ಇಲ್ಲ, ಸೇವೆ ಕೂಡ ಚೆನ್ನಾಗಿದೆ. ಆದರೆ, ಸಿಬ್ಬಂದಿ, ವೈದ್ಯರ ಕೊರತೆ ಇದೆ. 450 ಹಾಸಿಗೆ ಸಾಮರ್ಥ್ಯವಿದ್ದರೂ 650 ಕ್ಕೂ ಹೆಚ್ಚು ರೋಗಿಗಳು ಅಡ್ಮಿಟ್ ಆಗಿದ್ದಾರೆ. ಸಿಬ್ಬಂದಿ, ವೈದ್ಯರು, ಉಪಕರಣಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಆರ್‌ಎಂಒಗೆ ತಿಳಿಸಿದ ಸಂಸದರು, ಸ್ವಚ್ಛತೆಗೆ ಹೆಚ್ಚು ಗಮನಹರಿಸುವಂತೆ ಸೂಚಿಸಿದರು.
ಮೆಡಿಕಲ್ ಕಾಲೇಜು ವಿಶೇಷಾಧಿಕಾರಿ ಡಾ.ಯುವರಾಜ್, ಡಾ.ಬಸವರಾಜಪ್ಪ, ಡಾ.ಶ್ರೀರಾಮ್, ಡಾ.ಎಚ್.ಎಸ್.ಬಸವರಾಜ್, ಡಾ.ಜಯರಾಂ, ಡಾ.ವಿಜಯಕುಮಾರ್, ಡಾ.ಪ್ರಕಾಶ್, ಡಾ.ಮೋಹನ್, ಡಾ.ದೇವರಾಜ್ ಮತ್ತಿತರ ವೈದ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್ ಇದ್ದರು.
*ಪ್ರಧಾನ ಕಾರ‌್ಯದರ್ಶಿಗೆ ದೂರವಾಣಿ ಕರೆ
ಆರೋಗ್ಯ ಇಲಾಖೆ ಪ್ರಧಾನ ಕಾರ‌್ಯದರ್ಶಿ ಮೊಹಮ್ಮದ್ ಮೊಹೀಸಿನ್‌ಗೆ ದೂರವಾಣಿ ಕರೆ ಮಾಡಿದ ಸಂಸದರು, ಅವ್ಯವಸ್ಥೆ ಕುರಿತಂತೆ ಗಮನ ಸೆಳೆದರು. ಶನಿವಾರ ಆಸ್ಪತ್ರೆಗೆ ನೀವು ಭೇಟಿ ನೀಡುವ ಸಂದರ್ಭದಲ್ಲಿ ಸಭೆ ಕರೆಯಿರಿ, ನಾನು ಹಾಜರಾಗುತ್ತೇನೆ ಎಂದರು.
*ರೋಗಿಗಳ ದೂರು
ಆಸ್ಪತ್ರೆ ವಿವಿಧ ವಾರ್ಡ್, ಪ್ರಯೋಗಾಲಯ, ಔಷಧ ವಿಭಾಗ ಇತ್ಯಾದಿಗಳನ್ನು ಸಂಸದರು ಪರಿಶೀಲಿಸಿದರು. ಜಿಲ್ಲಾಸ್ಪತ್ರೆ ಪ್ರಮುಖ ವೈದ್ಯರೇ ನರ್ಸಿಂಗ್ ಹೋಂ ನಡೆಸುತ್ತಾರೆ. ಸ್ಕಾೃನಿಂಗ್‌ಗೆ ಹೊರಗೆ ಬರೆದುಕೊಡುತ್ತಾರೆ ಎಂಬಿತ್ಯಾದಿ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದವು.