

ಚಾಮರಾಜನಗರ: ಅಪಘಾತದಲ್ಲಿ ಗಾಯಗೊಂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬರು ಶಾಂತಕುಮಾರ್ ಅವರು ಶೀಘ್ರ ಗುಣಮುಖರಾಗಲೆಂದು ಶುಕ್ರವಾರ ಶ್ರೀಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ ಮಾತನಾಡಿ, ಪಂಜಾಬಿನಲ್ಲಿ ನಡೆಸುತ್ತಿರುವ ಸತ್ಯಾಗ್ರಹದ ಹಿನ್ನಲೆಯಲ್ಲಿ ಕೇಂದ್ರ ಸಚಿವರು ಕರೆದಿದ್ದ ಸಭೆಗೆ ಭಾಗವಹಿಸಲು ತಮಿಳುನಾಡು ರೈತ ಮುಖಂಡರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕುರುಬೂರು ಶಾಂತಕುಮಾರ್ ಅವರು ರಸ್ತೆ ಅಪಘಾತವಾಗಿ ಗಾಯಗೊಂಡಿದ್ದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಆಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.
ಈ ಸಂದರ್ಭ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಮೂಡ್ಲುಪುರ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ನಂಜದೇವನಪುರದ ಸತೀಶ್, ತಾಲೂಕು ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ತಾಲೂಕು ಕಾರ್ಯದರ್ಶಿ ಉಡಿಗಾಲ ಸುಂದ್ರಪ್ಪ, ಗೌಡಿಕೆ ಶಿವಕುಮಾರ್ , ಜಿ.ಮಹದೇವಸ್ವಾಮಿ, ಟ್ರ್ಯಾಕ್ಟರ್ ಮಹೇಶ್, ಎಂ.ಬಿ.ರಾಜು, ವೀರನಪುರ ಗುರುಸ್ವಾಮಿ, ಕುರುಬೂರು ಮಂಜು ಇತರರು ಹಾಜರಿದ್ದರು.