

ಯಾದಗಿರಿ: ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ ನಡೆದ ವಾಂತಿ-ಭೇದಿ ಪ್ರಕರಣದಿಂದ ಆಸ್ಪತ್ರೆ ಸೇರಿದ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ನಂತರ ಯಾದಗಿರಿ ಜಿಲ್ಲಾಸ್ಪತ್ರಗೆ ಆಗಮಿಸಿ, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ ಮಾತನಾಡಿ, ಘಟನೆಗೆ ಸಂಬಂಸಿದಂತೆ ಸೂಕ್ತ ತನಿಖೆ ನಡೆಸಲು ಈಗಾಗಲೇ ಜಿಲ್ಲಾಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಕುಡಿಯುವ ನೀರಿನ ಸ್ಯಾಂಪಲ್ ಸಹ ಪರೀಕ್ಷೆಗಾಗಿ ಈಗಾಗಲೇ ಲ್ಯಾಬ್ಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಕಳೆದ 4 ತಿಂಗಳ ಹಿಂದೆ ನನ್ನ ಕ್ಷೇತ್ರದ ಅನಪುರ ಗ್ರಾಮದಲ್ಲೂ ಸಹ ಇಂಥದಕ್ಕೆ ಪ್ರಕರಣ ನಡೆದಿತ್ತು. ಅದಕ್ಕೂ, ಇದಕ್ಕೂ ಸಾಮ್ಯತೆ ಇದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ವಾಂತಿ-ಭೇದಿಯಾಗಿ ಆಸ್ಪತ್ರೆ ಸೇರಿದ ಎಲ್ಲರೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ವೈದ್ಯರಿಗೆ ಹಾಗೂ ಆರೋಗ್ಯ ಇಲಾಖೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಘಟನೆ ನನ್ನ ಗಮನಕ್ಕೆ ಬಂದಾಗ ಬೆಂಗಳೂರಿನಲ್ಲಿದ್ದೆ. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ತಕ್ಷಣ ಅವರು ಸಹ ಕ್ಷಣಮಾತ್ರದಲ್ಲಿ ಸ್ಪಂದಿಸಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರಗೆ ಗ್ರಾಮಕ್ಕೆ ಭೇಟಿ ನೀಡುವಂತೆ ನಿದರ್ೇಶನ ನೀಡಿದರು.
ಬುಧವಾರ ಸಚಿವ ಸಂಪುಟ ಸಭೆ ಇದ್ದರೂ ಸಹ ದರ್ಶನಾಪುರ ಅವರು ಇಮ್ಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅನಪುರ ಗ್ರಾಮದಲ್ಲಿ ಇಂಥದ್ದೆ ಘಟನೆ ನಡೆದು ಮೂರು ಜನ ಮೃತಪಟ್ಟಾಗ ಅಂದಿನ ಉಸ್ತುವಾರಿ ಸಚಿವರು ಸೌಜನ್ಯಕ್ಕಾದರೂ ಭೇಟಿ ನೀಡಲಿಲ್ಲ. ಸ್ಥಳೀಯ ಶಾಸಕರು ಸಚಿವರಿದ್ದರೆ, ಜಿಲ್ಲೆಯ ಬಗ್ಗೆ ಕಳಕಳಿ ಎಷ್ಟಿರುತ್ತದೆ ಎಂಬುದಕ್ಕೆ ದರ್ಶನಾಪುರ ಅವರ ಕಾಳಜಿ ಉದಾಹರಣೆ ಸಾಕು. ಹೀಗಾಗಿ ನಾನು ಸಿಎಂ ಮತ್ತು ಸಚಿವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದರು.