ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

District Hospital, Collectorate, Medicine System, Surgery Department, Orthopedics, Eye Department,
ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿದ ರೊಟ್ಟಿ ಯಂತ್ರವನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್ ವೀಕ್ಷಿಸಿದರು. ಡಾ. ಶಿವಾನಂದ ಮಾಸ್ತಿಹೋಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಅಥಣಿ ರಸ್ತೆಯಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಗೆ ಶನಿವಾರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಮತ್ತು ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಕುರಿತು ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯಲ್ಲಿನ ಒಪಿಡಿ, ಆಪರೇಶನ್ ಥಿಯೇಟರ್, ಚಿಕ್ಕಮಕ್ಕಳ ವಿಭಾಗ, ಮೆಡಿಸಿನ್ ವ್ಯವಸ್ಥೆ, ಸರ್ಜರಿ ವಿಭಾಗ, ಅರ್ಥೋಪೆಡಿಸ್, ಕಣ್ಣಿನ ವಿಭಾಗ, ಇಎನ್‌ಟಿ ವಿಭಾಗ ಮತ್ತು ಪ್ರಯೋಗಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿನ ಸ್ವಚ್ಛತೆ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹೊಸದಾಗಿ ನಿರ್ಮಾಣವಾಗುತ್ತಿರುವ 250 ಹಾಸಿಗೆಯುಳ್ಳ ಆಸ್ಪತ್ರೆಗೆ ಭೇಟಿ ನೀಡಿ ತ್ವರಿತವಾಗಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಡಿಎನ್‌ಬಿ ತರಬೇತಿಯಲ್ಲಿ 35 ಜನ ವಿದ್ಯಾರ್ಥಿಗಳಿದ್ದು, ಅವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವಂತೆ ಮತ್ತು ಹೊರ ರೋಗಿಗಳ ವಿಭಾಗದಲ್ಲಿ ಸರತಿ ಸಾಲು ತಪ್ಪಿಸಲು ಕ್ಯೂಆರ್ ಕೋಡ್ ಅಥವಾ ‘ಅಭಾ’ ಆ್ಯಪ್ ಮೂಲಕ ನೋಂದಣಿ ಮಾಡುವ ವಿಧಾನ ಪರೀಶೀಲಿಸಿ ಅವರು ಸ್ವತಃ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಅದರ ಕಾರ್ಯವೈಖರಿ ಪರಿಶೀಲಿಸಿದರು.

ನಂತರ ಜಿಲ್ಲಾ ಶಸ್ತ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳ್ಳಿ ಮಕ್ಕಳ ವಿಭಾಗ, ಹೆರಿಗೆ ವಿಭಾಗಗಳಲ್ಲಿ ಕಷ್ಟಕರವಾದ ಚಿಕಿತ್ಸೆ ಮಾಡಿದ ಮತ್ತು ಪರಿಹರಿಸಿದ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಆಸ್ಪತ್ರೆ ವೈದ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತಿತರರಿದ್ದರು.

ಗಂಟೆಗೆ 500 ರೊಟ್ಟಿ ಮಾಡುವ ಯಂತ್ರ
ಜಿಲ್ಲಾಧಿಕಾರಿ ಟಿ. ಭೂಬಾಲನ್ ಜಿಲ್ಲಾಸ್ಪತ್ರೆಯಲ್ಲಿನ ಅಡುಗೆ ಕೋಣೆಗೆ ಭೇಟಿ ನೀಡಿ ಅಲ್ಲಿ ಅಡುಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಿ ಹೊಸದಾಗಿ ರೊಟ್ಟಿ ಮಾಡುವ ಯಂತ್ರ ವೀಕ್ಷಿಸಿದರು. ಈ ಯಂತ್ರ ಗಂಟೆಗೆ 500 ರೊಟ್ಟಿಗಳನ್ನು ಮಾಡುತ್ತದೆ. ಯಂತ್ರವನ್ನು ಆಸ್ಪತ್ರೆಯ ವೈದ್ಯರು ಮತ್ತು ಕೆಲವು ಎನ್‌ಜಿಒಗಳ ಸಹಕಾರದಲ್ಲಿ ಖರೀದಿ ಮಾಡಿದ್ದು, ಆಸ್ಪತ್ರೆಗೆ ದಾಖಲಾಗುವ ಒಳರೋಗಿಗಳ ಊಟೋಪಚಾರದ ವ್ಯವಸ್ಥೆಗಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಶಸ್ತ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳ್ಳಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net