

* ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆ
* ಜರೂರಾಗಲಿ ಹೆಚ್ಚುವರಿ ತಜ್ಞರ ನೇಮಕ
* ಆರೋಗ್ಯ ಸಚಿವರ ‘ರವಸೆ ಹುಸಿ
ಗಂಗಾಧರ್ ಬೈರಾಪಟ್ಟಣ ರಾಮನಗರ
ಹೊರಗಿನಿಂದ ನೋಡಿದರೆ ಅದ್ಭುತ ಆಸ್ಪತ್ರೆ. ತಕ್ಷಣಕ್ಕೆ ಎಲ್ಲವೂ ಸಿಗುತ್ತದೆ. ಒಂದು ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಇಲ್ಲಿ ಎಲ್ಲವೂ ಏರುಪೇರು.
ಹೌದು... ಇದು ರಾಮನಗರ ಜಿಲ್ಲಾಸ್ಪತ್ರೆಯ ನಿಜ ಕಥೆ. ನೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಮನಗರ ಸೂಪರ್ ಸ್ಪೆಷಾಲಿಟಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಇದರಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳು ಅನಿವಾರ್ಯವಾಗಿ ಹೊರ ಜಿಲ್ಲೆಗಳ ಮೇಲೆ ಆಶ್ರಯಿಸಬೇಕಾಗಿದೆ.
ಹಲವು ವರ್ಷಗಳ ಹಿಂದೆಯೇ ಕಾರ್ಯರಂಭ ಮಾಡಬೇಕಿದ್ದ ಆಸ್ಪತ್ರೆ, ಕಳೆದ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಂಡಿತು. ಸುಮಾರು 374 ಬೆಡ್ ಸೌಲಭ್ಯದ ಆಸ್ಪತ್ರೆ ಇದಾಗಿದ್ದು, ಜಿಲ್ಲೆಯ ರೋಗಿಗಳಿಗೆ ಇಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಆಸ್ಪತ್ರೆ ದೊಡ್ಡದಾದರೂ ಇದಕ್ಕೆ ಬೇಕಾದ ಸಿಬ್ಬಂದಿ ಕೊಡುವಲ್ಲಿ ಸರ್ಕಾರ ವಿಲವಾಗಿರುವ ಕಾರಣ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೆ, ಅನಿವಾರ್ಯವಾಗಿ ನೆರೆಯ ಮಂಡ್ಯ, ಇಲ್ಲವೇ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.
ನೂತನ ಆಸ್ಪತ್ರೆ ಉದ್ಘಾಟನೆಗೊಂಡ ನಂತರ ಖಾಸಗಿ ಆಸ್ಪತ್ರೆಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಆಗಿ, ವಾರದ ಮೊದಲ ನಾಲ್ಕು ದಿನ ಸರಾಸರಿ 2 ಸಾವಿರ ಮಂದಿ ಮತ್ತು ಕೊನೆಯ ಎರಡು ದಿನ 1500 ಮಂದಿ ಒಪಿಡಿ ರೋಗಿಗಳು ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಆದರೆ, ಇಷ್ಟೊಂದು ಸಂಖ್ಯೆಯ ರೋಗಿಗಳನ್ನು ನಿರ್ವಹಣೆ ಮಾಡಲು ಬೇಕಾದ ತಜ್ಞ ವೈದ್ಯರಿದ್ದರೂ ಮತ್ತಷ್ಟು ಬೇಕಿದ್ದರೆ, ಶುಶ್ರೂಷಕಿಯರು ಸೇರಿ ಪ್ರಮುಖ ಹುದ್ದೆಗಳು ಸಾಕಷ್ಟು ಖಾಲಿ ಉಳಿದಿವೆ. ಮಂಜೂರಾದ ಒಟ್ಟು ಬಿ, ಸಿ, ಡಿ ಗ್ರೂಪ್‌ನ 202 ಹುದ್ದೆಗಳಲ್ಲಿ 96 ಹುದ್ದೆಗಳು ಖಾಲಿ ಇವೆ. ಡಿ ಗ್ರೂಪ್‌ನ 14 ಹುದ್ದೆಗಳು ಮತ್ತು 9 ನಾನ್ ಕ್ಲಿನಿಕಲ್ ಸಿಬ್ಬಂದಿ ಹೊರಗುತ್ತಿಗೆ ಆದಾರದ ಮೇಲೆ ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ.
ರಾಮನಗರ ಜಿಲ್ಲಾಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕಿದ್ದರೆ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುವ ಜತೆಗೆ, ಫೊರೆನ್ಸಿಕ್ ತಜ್ಞರು, ಮೂಳೆ ರೋಗ ತಜ್ಞರು, ಗೈನಕಾಲಜಿಸ್ಟ್, ಯುರಾಲಜಿಸ್ಟ್, ನರರೋಗ ತಜ್ಞರು, ಹೃದ್ರೋಗ ತಜ್ಞ ವೈದ್ಯರ ಅಗತ್ಯವಿದೆ. ಈಗಾಗಲೇ ಮಂಜೂರಾಗಿರುವ ಹುದ್ದೆಗಳು ಭರ್ತಿಯಾಗಿವೆ. ಆದರೆ, ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ, ಅನಿವಾರ್ಯ ಕಾರಣಕ್ಕೆ ವೈದ್ಯರು ರಜೆ ಹಾಕಿದರೆ ಆಸ್ಪತ್ರೆಯ ಪರಿಸ್ಥಿತಿ ಕೋಮಾಗೆ ತಲುಪುತ್ತದೆ.
ವರ್ಷದಿಂದ ಎರಡು ಬಾರಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ‘ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಬಾರಿ ಸಿಬ್ಬಂದಿ ಕೊರತೆ ಸರಿದೂಗಿಸುವ ಭರವಸೆ ನೀಡಿದ್ದಾರಾದರೂ, ಈವರೆಗೂ ಇದು ಕಾರ್ಯ ರೂಪಕ್ಕೆ ಬಂದಿಲ್ಲ.
ಸದ್ಯಕ್ಕೆ ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ವಿವಿಯ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡು, ಇಲ್ಲಿಗೆ ಕಲಿಯಲು ಬರುವ ವಿದ್ಯಾರ್ಥಿಗಳನ್ನು ತರಬೇತಿಗಾಗಿ ನಿಯೋಜನೆ ಮಾಡುವುದರಿಂದ ರಾಮನಗರದಲ್ಲಿ ಎಲ್ಲ ವರ್ಗದ ಸಿಬ್ಬಂದಿ ಕೊರತೆ ನೀಗಲಿದೆ. ಮತ್ತೊಂದೆಡೆ ತುರ್ತು ಚಿಕಿತ್ಸಾ ಘಟಕದ ಕಾಮಗಾರಿ ನಡೆಯುತ್ತಿದ್ದು, ಇದು ಕಾರ್ಯಾರಂಭ ಮಾಡಿದರೆ ಖಂಡಿತವಾಗಿ ಕೊಂಚ ಹೊರೆ ಕಡಿಮೆ ಆಗಲಿದೆ. ಇಲ್ಲವಾದರೆ ರಾಮನಗರ ಆಸ್ಪತ್ರೆ ರೋಗಿಗಳ ಪಾಲಿಗೆ ದೂರವಾಗಿಯೇ ಉಳಿದು ಬಿಡುತ್ತದೆ.
ಮಾತ್ರೆಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ನೀಡಬೇಕೆನ್ನುವ ಕಟ್ಟುನಿಟ್ಟಿನ ನಿಯಮ ಇದೆ. ಆದರೆ, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಹೊರಗಡೆ ಬರೆದುಕೊಡುತ್ತಾರೆ ಎನ್ನುವ ಆರೋಪವೂ ಸಾರ್ವಜನಿಕರಿಂದ ಇದೆ. ಆದರೆ, ಇದನ್ನು ಒಪ್ಪಿಕೊಳ್ಳುವ ಆಸ್ಪತ್ರೆ ಆಡಳಿತ, ಸರ್ಕಾರ ನಿಗದಿಪಡಿಸಿರುವ ಮಾತ್ರೆಗಳು ನಮ್ಮ ಬಳಿ ಇಲ್ಲದಿದ್ದರೆ ಅಂತಹ ಮಾತ್ರೆಗಳನ್ನು ಹೊರಗಡೆಯಿಂದ ತರಿಸಿಕೊಡಲು ಅವಕಾಶ ಇದೆ. ಕೆಲವೊಮ್ಮೆ ನಿಗದಿತ ಮಾತ್ರೆಗಳನ್ನು ಹೊರತುಪಡಿಸಿ ಬೇರೆ ಮಾತ್ರೆಗಳನ್ನು ಹೊರಗಡೆಯಿಂದಲೇ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಮಾತ್ರ ಬರೆದುಕೊಡಲಾಗುತ್ತದೆ ಎನ್ನುತ್ತಾರೆ.
ಮೊದಲ ಹಂತದಲ್ಲಿ 374 ಹಾಸಿಗೆ ಸಾಮರ್ಥ್ಯದೊಂದಿಗೆ ಹೊಸ ಆಸ್ಪತ್ರೆಯು ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ 120 ಐಸಿಯೂ ಬೆಡ್‌ಗಳಾಗಿದ್ದು, 4 ಮ್ಯಾಡುಲರ್ ಓಟಿ, ಸಾಮಾನ್ಯ ಓಟಿ, ಐಪಿಡಿ ಸೇರಿ ಹಲವು ವಿಭಾಗಗಳು ಇವೆ. ಪ್ರತಿ ನಿಮಿಷಕ್ಕೆ 1 ಸಾವಿರ ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಾಗಿದೆ. ಜತೆಗೆ ಟೊಯೋಟಾ ಕಂಪನಿಯು ಸಿ.ಟಿ. ಸ್ಕ್ಯಾನ್ ಯಂತ್ರ ನೀಡಲಾಗಿದೆ. ಇತ್ತೀಚಿಗೆ ಸ್ತನ ಕ್ಯಾನ್ಸರ್ ಪತ್ತೆಗಾಗಿ ಮೊನಾಗ್ರಫಿ ಯಂತ್ರವನ್ನೂ ಅಳಡಿಸಲಾಗಿದೆ. ಸಂಸದ ಡಾ.ಸಿ.ಎನ್.ಮಂಜುನಾಥ್ ಸಿಎಸ್‌ಆರ್ ನಿಧಿಯಡಿ ಎಕೋ ಪರೀಕ್ಷೆ ಆರಂಭಿಸುವ ಮೂಲಕ ಹೃದಯ ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಐಸಿಯು, ಎನ್‌ಐಸಿಯು ಜತೆಗೆ ಮಕ್ಕಳಿಗೆಂದೇ ವಿಶೇಷ ಐಸಿಯು ಇಲ್ಲಿವೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಬಹಳಷ್ಟು ಕೊಠಡಿಗಳ ಬಾಗಿಲು ಬಂದ್ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನಿಯೋಜಿಸಿದರೆ ಖಂಡಿತವಾಗಿ ಈ ‘ಭಾಗದ ರೋಗಿಗಳ ಪಾಲಿಗೆ ರಾಮನಗರ ಜಿಲ್ಲಾಸ್ಪತ್ರೆ ಸಂಜೀವಿನಿಯಾಗಲಿದೆ.
ಹುದ್ದೆಗಳ ವಿವರ ಮಂಜೂರು ಭರ್ತಿ ಖಾಲಿ
ತಜ್ಞ ವೈಧ್ಯರು 39 32 7
ಶುಶ್ರೂಕ್ಷಕರು 65 20 45
ಗ್ರೂಪ್ ಡಿ 46 14 32
ಒಟ್ಟು ಮಂಜೂರಾತಿ 341 138 96
ಜಿಲ್ಲಾಸ್ಪತ್ರೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆಗೆ ಪ್ರತಿ ದಿನ ಸಾವಿರಾರು ಮಂದಿ ಚಿಕಿತ್ಸೆಗೆ ಬರುತ್ತಾರೆ. ಚಿಕಿತ್ಸೆಗೆ ಬಂದವರು ಚಿಕಿತ್ಸೆ ಪಡೆದು ಹೋದರೆ ಪರವಾಗಿಲ್ಲ, ಶೌಚಗೃಹದ ಕೊಳಾಯಿಗಳನ್ನೂ ಬಿಡದೆ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಪ್ರತಿ ಬಾರಿ ನಲ್ಲಿಗಳು ಕಾಣೆ ಆದಾಗಲೂ ಹೊಸ ನಲ್ಲಿಗಳನ್ನು ಹಾಕಿಸಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಕಟ್ಟಡದ ಕಾಂಪೌಂಡ್‌ನಲ್ಲಿರುವ ತೊಟ್ಟಿಯೊಂದರ ಸುಮಾರು 25 ಕೆಜಿ ತೂಕದ ಕಬ್ಬಿಣದ ಮುಚ್ಚಳವನ್ನೇ ಮಹಿಳೆಯೊಬ್ಬರು ಮ‘್ಯಾಹ್ನವೇ ಕಳವು ಮಾಡಿಕೊಂಡು ಹೋಗಿದ್ದಾಳೆ ಎನ್ನುವ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ.
ಬೃಹತ್ ಜಿಲ್ಲಾಸ್ಪತ್ರೆಗೆ ಈಗ ಇರುವುದು ಕೇವಲ ಇಬ್ಬರು ಕಾವಲುಗಾರರು. ಈತ ಎಷ್ಟು ತಾನೇ ನೋಡಿಕೊಳ್ಳಲು ಸಾಧ್ಯ. ಇಲ್ಲಿಗೆ ಪ್ರತಿ ಪಾಳಿಯಲ್ಲಿ ಕೆಲಸ ಮಾಡಲು ಕನಿಷ್ಠ 4-5 ಮಂದಿ ಕಾವಲುಗಾರರ ಅಗತ್ಯವಿದೆ. ಮುಖ್ಯದ್ವಾರದಲ್ಲಿಯೇ ಮೂರು ಪಾಳಿಯಲ್ಲಿ ಕೆಲಸ ಮಾಡಲು ಪ್ರತಿ ದಿನ 3 ಮಂದಿ ಭದ್ರತಾ ಸಿಬ್ಬಂದಿ ಅಗತ್ಯವಿದೆ. ಆದರೆ, ಮಾನವ ಸಂಪನ್ಮೂಲ ಪಡೆದುಕೊಳ್ಳಲು ಬೇಕಾದ ಅನುಮತಿ ಈವರೆವಿಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿ ಒದಗಿಸಲು ಕೋರಲಾಗಿದೆ.
ಸಿ, ಡಿ ಗ್ರೂಪ್ ಸಿಬ್ಬಂದಿ ಕೊರತೆ ಇರುವ ತಜ್ಞ ವೈದ್ಯರ ಜತೆಗೆ ಮತ್ತಷ್ಟು ವೈದ್ಯರ ಅಗತ್ಯವಿದೆ. ಇದರ ಹೊರತಾಗಿಯೂ ಆಸ್ಪತ್ರೆಗೆ ಬರುವ ಪ್ರತಿ ರೋಗಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದೇವೆ.ಡಾ.ಮಂಜುನಾಥ್ಜಿಲ್ಲಾ ಶಸ್ತ್ರ ಚಿಕಿತ್ಸಕ, ರಾಮನಗರ==ರಾಮನಗರದಲ್ಲಿ ಹೆಸರಿಗೆ ಮಾತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಆದರೆ, ಇಲ್ಲಿಗೆ ಬಂದರೆ ಮಾತ್ರೆಗಳನ್ನು ಹೊರಗೆ ಬರೆದುಕೊಡುತ್ತಾರೆ. ಬೇಕಾದ ಸಮಯಕ್ಕೆ ತಜ್ಞ ವೈದ್ಯರು ಸಿಗುವುದಿಲ್ಲ. ಕೂಡಲೇ ಇದನ್ನು ಸರಿಪಡಿಸುವ ಕೆಲಸ ಮಾಡಲಿ.ಕೃಷ್ಣಪ್ಪಹೊನ್ನಾಯಕನಹಳ್ಳಿ, ರೈತ ಮುಖಂಡ