

ಚಿತ್ರದುರ್ಗ: ರಾಜ್ಯದ ವಿವಿಧ ಸರ್ಕಾರಿ ಜಿಲ್ಲಾಸ್ಪತ್ರೆಗಳನ್ನು ಉನ್ನತೀಕರಿಸಲು, ವೈದ್ಯಕೀಯ ಕಾಲೇಜುಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಕೇಂದ್ರ ತಂಡ ಕರ್ನಾಟಕಕ್ಕೆ ಭೇಟಿ ನೀಡಿದೆ.
ಮಂಗಳವಾರ ಜಿಲ್ಲಾಸ್ಪತ್ರೆಗೂ ಭೇಟಿ ನೀಡಿದ ಡಾ.ಇಮಾನ್ಷು ಭೂಷಣ್ ನೇತೃತ್ವದ ಆರೋಗ್ಯ ಇಲಾಖೆ ಮೇಲ್ವಿಚಾರಣಾ ಸಮಿತಿಯೂ ಸಮಸ್ಯೆ, ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿತು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾೃಂಡರ್ಡ್ಸ್ (ಐಪಿಎಚ್‌ಸಿ) ಅನುಸಾರ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು, ಅದಕ್ಕಾಗಿ ತಂಡ ವಿಸಿಟ್ ಮಾಡಿತ್ತು.
ಈಗ ಜಿಲ್ಲಾಸ್ಪತ್ರೆಯಲ್ಲಿರುವ ನ್ಯೂನ್ಯತೆ ದಾಖಲಿಸಿದ್ದೇವೆ. ಕೆಎಂಇಆರ್‌ಸಿ, ಕೆಕೆಡಿಬಿಯಡಿ ನೀಡುವ ಅನುದಾನ ಸದ್ಬಳಕೆ ಆಗುತ್ತಿದೆಯೇ ಎಂಬ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ತಂಡವೂ ಎಲ್ಲ ಮಾಹಿತಿ ಕಲೆಹಾಕಿ, ಅಧಿಕಾರಿಗಳ ಸಭೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಹೊರರೋಗಿಗಳ ವಿಭಾಗ, ಒಳರೋಗಿಗಳ ವಿವಿಧ ವಾರ್ಡ್‌ಗಳಲ್ಲಿ ಅಧಿಕಾರಿಗಳು ಪರಿಶೀಲಿಸಲು ಮುಂದಾದರು. ಜಿಲ್ಲಾಸ್ಪತ್ರೆಗೆ ಬೇಕಿರುವ ಅಗತ್ಯತೆಗಳ ಕುರಿತು ಮಾಹಿತಿ ದಾಖಲಿಸಿಕೊಂಡರು. ಇಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕಪಡಿಸಿದ ಸಮಿತಿ ನ್ಯೂನತೆಗಳನ್ನು ಪಟ್ಟಿ ಮಾಡಿಕೊಂಡಿತು.
ಜಿಲ್ಲಾಸ್ಪತ್ರೆಯಲ್ಲಿನ ಕೊಠಡಿಗಳು ಚಿಕ್ಕದಾಗಿವೆ. ಜನ ಮಾತ್ರ ಕಿಕ್ಕಿರಿದು ಸೇರುತ್ತಿದ್ದಾರೆ. ರೋಗಿಗಳ ಸಂಖ್ಯೆಗೆ ಅನುಗುಣುವಾಗಿ ನಾವು ಪ್ರಸ್ತಾವನೆ ಸಲ್ಲಿಸುತ್ತೇವೆ. ಪ್ರಾಥಮಿಕ-ಸಮುದಾಯ ಆರೋಗ್ಯ ಕೇಂದ್ರಗಳು ಕೂಡ ಇದಕ್ಕೆ ಹೊರತಲ್ಲ. ಸಮರ್ಪಕ ವರದಿ ಸಲ್ಲಿಸಲಿದ್ದೇವೆ ಎಂದು ವಿವರಿಸಿತು.
ಆರೋಗ್ಯ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಲ್ಲಾಸ್ಪತ್ರೆಗಳ ಉನ್ನತೀಕರಣಕ್ಕಾಗಿ ದೆಹಲಿಯ ತಜ್ಞರ ತಂಡವನ್ನು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಲು ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ.
ಉಪನಿರ್ದೇಶಕ ವೀರಭದ್ರಯ್ಯ, ಡಿಎಚ್‌ಒ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಇತರರಿದ್ದರು.