ಜಿಲ್ಲಾಮಟ್ಟದ ಶಿಕ್ಷಣ ಅದಾಲತ್ ಆಯೋಜಿಸಿ: ತನ್ವೀರ್ ಸೇಠ್ ಆಗ್ರಹ

5
Published on

ಮೈಸೂರು: ಶಿಕ್ಷಣ ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಅದಾಲತ್ ಆಯೋಜಿಸಬೇಕು ಎಂದು ಮಾಜಿ ಶಿಕ್ಷಣ ಸಚಿವರೂ ಆದ ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

2018ರಲ್ಲಿ ರಾಜ್ಯಾದ್ಯಂತ 256 ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಮೂಲಕ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದಕ್ಕೆ ಪ್ರತ್ಯೇಕ ಅನುದಾನ ನೀಡುವ ಕುರಿತು ತೀರ್ಮಾನವಾಗಿತ್ತು. ಆದರೆ, ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಜತೆಗೆ, ಹೊಸ ಶಾಲೆಗಳನ್ನೂ ಮಂಜೂರು ಮಾಡಿಲ್ಲ. ಶಿಕ್ಷಕರ ನ್ಯೂನತೆಗಳ ಪರಿಹಾರಕ್ಕಾಗಿ ಸ್ಪಷ್ಟ ಮಾರ್ಗಸೂಚಿ ಇಲ್ಲ. ಈ ಕುರಿತು ರಾಜ್ಯ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರ ವರ್ಗಾವಣೆ ಗೊಂದಲದ ಗೂಡಾಗಿದೆ. ಇದನ್ನು ಸರಿಪಡಿಸಿ ಶಿಕ್ಷಕರ ಸ್ನೇಹಿಯಾದ ವರ್ಗಾವಣೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಬೇಕು ಎಂದೂ ಆಗ್ರಹಿಸಿದರು.
ಶಾಲೆಗಳ ಶೌಚಗೃಹ ನಿರ್ಮಾಣ, ಅದರ ನಿರ್ವವಣೆ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸುವುದು ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಆದ್ದರಿಂದ ಗ್ರಾಪಂ, ತಾಪಂ ಮುತ್ತು ಜಿಪಂಗೆ ರಾಜ್ಯ ಸರ್ಕಾರ ಸ್ಪಷ್ಟ ಸೂಚನೆ ನೀಡಬೇಕು. ಮಕ್ಕಳ ಮತ್ತು ಶಾಲಾ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನವನ್ನು ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳಿಗೆ ಮೇಜು, ಡೆಸ್ಕ್, ಬೆಂಚು ಇತ್ಯಾದಿ ಪೀಠೋಪಕರಣ ನೀಡಬೇಕು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಹಣವನ್ನು ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದನ್ನು ತೆರವು ಮಾಡಿ ಶೇ.30ರಷ್ಟು ಅನುದಾನ ಬಳಕೆಗೆ ಅವಕಾಶ ನೀಡಲಾಗಿದೆ. ಈ ಹಣ ಶಾಲೆಗಳ ಅಭಿವೃದ್ಧಿಗೆ ವಿನಿಯೋಗ ಆಗಬೇಕು ಎಂದರು.

ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಶಿಕ್ಷಕರು ಪ್ರಶಸ್ತಿ ಹಿಂದೆ ಬೆನ್ನು ಹತ್ತಬಾರದು. ಇದು ಸರಿಯಲ್ಲ. ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಬೇಕು. ಆಗ ಮಾತ್ರ ಸಾರ್ಥಕತೆ ದೊರೆಯಲಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ 11ನೇ ತರಗತಿ ವರೆಗೂ ಪರೀಕ್ಷೆ ಇಲ್ಲ. ಇದಕ್ಕೆ ನನ್ನ ಆಕ್ಷೇಪಣೆ ಇದೆ. ಈಗ 9ನೇ ತರಗತಿವರೆಗೆ ಪರೀಕ್ಷೆ ಇಲ್ಲ. ಇಂತಹ ಸ್ಥಿತಿಯಲ್ಲೇ ಶಿಕ್ಷಕರಲ್ಲಿ ಸೋಂಬೇರಿತನ ಹೆಚ್ಚಾಗಿದೆ. ಪಾಠ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಶಿಕ್ಷಣದ ಗುಣಮಟ್ಟವೂ ಕುಸಿದಿದೆ. ಪಿಯು ಕಾಲೇಜಿಗೆ ಹೋದ ವಿದ್ಯಾರ್ಥಿಗಳಿಗೆ ಸರಿಯಾಗಿ ಎಬಿಸಿಡಿ, ಕಾಗುಣಿತವೇ ಬರಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪರೀಕ್ಷೆ ಇಲ್ಲದ ಕಾರಣಕ್ಕೆ ಶಿಕ್ಷಕರ ಲಕ್ಷೃ ಕಡಿಮೆಯಾಗಿ, ಖಾಸಗಿ ಬದುಕಿನತ್ತ ಗಮನ ಹೆಚ್ಚಾಗಿದೆ. 2021-22ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ 27ನೇ ಸ್ಥಾನ ಪಡೆದಿರುವುದು ತಲೆತಗ್ಗಿಸುವ ಸಂಗತಿ ಎಂದರು.

ಸರ್ಕಾರಿ ಶಾಲೆಗಳಿಗೆ ಸರ್ಕಾರಿ ಶಾಲಾ ಶಿಕ್ಷಕರು, ಅಧಿಕಾರಿಗಳು, ಶಾಸಕರ ಮಕ್ಕಳು ಹೋಗಲ್ಲ. ಅಲ್ಲಿಗೆ ಬರುವ ಬಡವರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ. ಆದ್ದರಿಂದ ಸರ್ಕಾರಿ ಶಾಲಾ ಶಿಕ್ಷಕರು ಉತ್ತಮ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳನ್ನು ಬದಲಾವಣೆ ಮಾಡುವ ಶಕ್ತಿ ಶಿಕ್ಷಕರಿಗೆ ಇದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮರ್ಥ್ಯವನ್ನು ತಿಳಿಸಿ, ಜ್ಞಾನದ ಅರಿವು ಮೂಡಿಸಿ, ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಈಗ ಶಿಕ್ಷಣ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿದೆ. ಇದಕ್ಕೆ ಕಡಿವಾಣ ಹಾಕಬೇಕು. ಶಿಕ್ಷಣ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ ಎಂದರು.

2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ತಲಾ 10 ಶಿಕ್ಷಕರು ಸೇರಿದಂತೆ 30 ಶಿಕ್ಷಕರಿಗೆ ಪ್ರದಾನ ಮಾಡಲಾಯಿತು. ಮೇಯರ್ ಸುನಂದಾ ಪಾಲನೇತ್ರ, ಶಾಸಕ ಎಲ್.ನಾಗೇಂದ್ರ, ಮೈಲಾಕ್ ಅಧ್ಯಕ್ಷ ಆರ್.ರಘು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಇನ್ನಿತರರು ಇದ್ದರು.

ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಇದನ್ನು ತಲುಪಿಸಲಾಗುವುದು. ಎಲ್ಲ ಶಿಕ್ಷಕರಿಗೂ ಪ್ರಶಸ್ತಿ ನೀಡಲು ಆಗಲ್ಲ. ಬಹಳಷ್ಟು ಜನರು ಅತ್ಯುತ್ತಮ ಶಿಕ್ಷಕರು ಇದ್ದಾರೆ. ಅದರಲ್ಲಿ ಆಯ್ದ ಕೆಲವರಿಗೆ ಮಾತ್ರ ಪುರಸ್ಕಾರ ನೀಡಲಾಗಿದೆ.ಎಸ್.ಟಿ.ಸೋಮಶೇಖರ್ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net