

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸೃಜನಾ ರಂಗ ಮಂದಿರದಲ್ಲಿ ಸೆ. 25ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಾರ್ವಜನಿಕರ ದೂರು, ಅಹವಾಲು ಸ್ವೀಕರಿಸಲು ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನರು ತಮ್ಮ ವೈಯಕ್ತಿಕ ಹಾಗೂ ಸಾಮುದಾಯಿಕ ಸಮಸ್ಯೆಗಳ ಕುರಿತು ದೂರು, ಅಹವಾಲುಗಳಿದ್ದಲ್ಲಿ ಸೆ. 21ರಿಂದಲೇ ಐಪಿಜಿಆರ್‌ಎಸ್ ಆನ್‌ಲೈನ್ ipgrs.karnataka.gov.in ತಂತ್ರಾಂಶದಲ್ಲಿ ದಾಖಲಿಸಬೇಕು. ಆಯಾ ತಾಲೂಕಿನ ತಹಸೀಲ್ದಾರ ಕಚೇರಿಗೆ ತೆರಳಿ ಅಹವಾಲು ಸಲ್ಲಿಸಿದಲ್ಲಿ ಆಯಾ ಕಚೇರಿ ಸಿಬ್ಬಂದಿ ಐಪಿಜಿಆರ್‌ಎಸ್‌ನಲ್ಲಿ ದಾಖಲಿಸುತ್ತಾರೆ ಎಂದರು.
ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಅಹವಾಲು ಸಲ್ಲಿಸಬಹುದು. ಸಂಬಂಧಪಟ್ಟ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಜನತಾ ದರ್ಶನದಲ್ಲಿ ಉಪಸ್ಥಿತರಿರಲಿದ್ದಾರೆ. ಸ್ಥಳದಲ್ಲೇ ನಿಯಮಾನುಸಾರ ಪರಿಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಕ್ರಮವಹಿಸಲಾಗುವುದು. ಕಾನೂನಾತ್ಮಕ ಕ್ರಮಗಳ ಅಗತ್ಯವಿದ್ದಲ್ಲಿ ದೂರುದಾರರಿಗೆ ಹಿಂಬರಹ ನೀಡಿ ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜನತಾ ದರ್ಶನದ ದಿನದಂದು ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿ, ಮನವಿಗಳನ್ನು ಈಗಾಗಲೇ ಚಾಲ್ತಿಯಲ್ಲಿರುವ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿ ವಿಲೇವಾರಿ ಮಾಡಲಿದ್ದಾರೆ. ಜಿಲ್ಲಾಮಟ್ಟದ ಜನತಾ ದರ್ಶನ ಪ್ರತಿ ತಿಂಗಳು ನಡೆಯಲಿದೆ. ಜಿಲ್ಲಾಧಿಕಾರಿ ಪ್ರತಿ 15 ದಿನಗಳಿಗೊಮ್ಮೆ ಒಂದು ತಾಲೂಕಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ತಾಲೂಕು ಮಟ್ಟದ ಜನತಾ ದರ್ಶನ ಆಯೋಜಿಸಲಾಗುವುದು ಎಂದರು.