

ಚಿಂತಾಮಣಿ: ನಗರದಲ್ಲಿ ಎರಡು ಕರೊನಾ ಸೋಂಕು ಪತ್ತೆಯಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ ಇರುವವರಿಗೆಲ್ಲಾ ತಪಾಸಣೆ ನಡೆಸಿದ್ದೇವೆ. ಸೆಕೆಂಡರಿ ಕಾಂಟ್ಯಾಕ್ಟ್ ಇರುವವರನ್ನು ತಪಾಸಣೆ ಮಾಡುತ್ತಿದ್ದೇವೆ, 58 ಮಂದಿ ತಪಾಸಣೆ ನೆಗೆಟಿವ್ ಬಂದಿದ್ದು 12 ಮಂದಿ ಫಲಿತಾಂಶ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಕಂಟೇನ್ಮೆಂಟ್ ಜೋನ್ ಮಾಡಲಾಗಿದ್ದು ಅಲ್ಲಿರುವವರಿಗೆ ಬೇಕಾದ ವಸ್ತುಗಳನ್ನು ಅವರ ಮನೆಗೆ ಕಳಿಸುತ್ತೇವೆ. ಆರೋಗ್ಯ ಸರ್ವೇ ಮಾಡಲಾಗಿದೆ. ಯಾರಿಗೂ ಜ್ವರ ಮತ್ತು ಕೆಮ್ಮು ಇಲ್ಲ, ಪ್ರತಿದಿನ ತಪಾಸಣೆ ಮಾಡಲಾಗುತ್ತಿದೆ. ಕಂಟೇನ್ಮೆಂಟ್ ಜೋನ್‌ನಲ್ಲಿ ಯಾವ ಅಂಗಡಿಗಳು ಇರಲ್ಲ. ನಗರದ ಉಳಿದ ಪ್ರದೇಶದಲ್ಲಿ ವ್ಯಾಪಾರ ಮಾಡುವ ಬಗ್ಗೆ ವ್ಯಾಪಾರಸ್ಥರ ನಿರ್ಣಯಕ್ಕೆ ಬಿಟ್ಟಿದ್ದೇವೆ ಎಂದರು.
ನಗರದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದರೆ ಅಂತವರಿಗೆ ದಂಡ ಹಾಕುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ನಗರಸಭೆ ಪೌರಾಯುಕ್ತ ಮತ್ತಿತರ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಎಲ್ಲ ಅಧಿಕಾರಿಗಳ ಜತೆ ನಗರದ ಎನ್.ಆರ್.ಬಡಾವಣೆಯ ಕಂಟೇನ್ಮೆಂಟ್ ಜೋನ್ ಪ್ರದೇಶ ಮತ್ತು ಸೋಂಕು ತಗಲಿರುವ ಮನೆ ಬಳಿ ಪರಿಶೀಲನೆ ನಡೆಸಿದರು.
ಜಿಲ್ಲಾ ರಕ್ಷಣಾಧಿಕಾರಿ ಜೆ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್, ಡಿ.ಹನುಮಂತರಾಯಪ್ಪ, ನಗರಸಭೆ ಪೌರಾಯುಕ್ತ ಹರೀಶ್, ಡಿವೈಎಸ್‌ಪಿ ಶ್ರೀನಿವಾಸ್, ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಆನಂದ್ ಕುಮಾರ್, ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎನ್.ಶ್ರೀನಿವಾಸಪ್ಪ, ತಾಲೂಕು ಅರೋಗ್ಯಾದಿಕಾರಿ ಡಾ.ರಾಮ ಚಂದ್ರಾರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಸಿದ್ದು ನಾರಾಯಣಸ್ವಾಮಿ ಇತರ ಅಧಿಕಾರಿಗಳಿದ್ದರು.
ಜಿಲ್ಲಾಧಿಕಾರಿಯಿಂದ ಅಧಿಕಾರಿಗಳ ತರಾಟೆ: ನಗರದ ಆಶ್ರಯ ಬಡಾವಣೆಯಲ್ಲಿರುವ ಕ್ವಾರಂಟೈನ್‌ನಲ್ಲಿ ಮೂಲಸೌಲಭ್ಯಗಳು ಇಲ್ಲದೆ ಇರುವ ಬಗ್ಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದುನಾರಾಯಣಸ್ವಾಮಿ ಅವರನ್ನು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡರು. ಕ್ವಾರೆಂಟೈನ್‌ನಲ್ಲಿರುವವರಿಗೆ ಒಳ್ಳೆಯ ಸೌಲಭ್ಯ ನೀಡುವಂತೆ ತಾಕೀತು ಮಾಡಿದರು.