ಜಿಲ್ಲಾಧಿಕಾರಿಯಿಂದ ಚೆಕ್​ಪೋಸ್ಟ್ ಪರಿಶೀಲನೆ

16 NRD-1B
Published on

ನರಗುಂದ: ತಾಲೂಕಿನ ಕೊಣ್ಣೂರ ಚೆಕ್​ಪೋಸ್ಟ್ ಮತ್ತು ಎಪಿಎಂಸಿ ಆವರಣದಲ್ಲಿರುವ ನಿರಾಶ್ರಿತರ ಶೆಡ್​ಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಗುರುವಾರ ಭೇಟಿ ನೀಡಿ ಕರೊನಾ ನಿಯಂತ್ರಣ ಕುರಿತು ತಾಲೂಕಾಡಳಿತ ಕೈಗೊಂಡಿರುವ ವಿವಿಧ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆಯನ್ನು ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ವಿಜಯಪುರ ಮತ್ತು ಬಾಗಲಕೋಟೆಗಳಿಂದ ಜಿಲ್ಲೆಗೆ ಅನವಶ್ಯಕವಾಗಿ ಪ್ರವೇಶಿಸುತ್ತಿರುವ ಎಲ್ಲ ವಾಹನಗಳಿಗೆ ಈಗಾಗಲೇ ನಿರ್ಬಂಧ ವಿಧಿಸಲಾಗಿದೆ. ನರಗುಂದ ತಾಲೂಕಿನಾದ್ಯಂತ ಪ್ರತಿನಿತ್ಯ ಬೆಳಗ್ಗೆ 7 ರಿಂದ 10 ಗಂಟೆವರೆಗೆ ತರಕಾರಿ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದರು.

ಲಾಕ್​ಡೌನ್​ನಿಂದಾಗಿ ಕಳೆದ ವರ್ಷ ಪ್ರವಾಹದಿಂದ ಹಾನಿಗೊಳಗಾದ ಕೊಣ್ಣೂರ ಭಾಗದ ಮನೆಗಳ ಮರು ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ. ಈ ಮನೆಗಳ ನಿರ್ವಣಕ್ಕೆ ಏ.20ರ ನಂತರ ಅವಕಾಶ ಕಲ್ಪಿಸಲಾಗುವುದು. ಬಿ ಕೆಟಗೆರಿಯ ಕೆಲ ಕುಟುಂಬಗಳು ಸರ್ಕಾರದಿಂದ ನೀಡಲಾಗುವ 3 ಲಕ್ಷ ರೂಪಾಯಿ ಪರಿಹಾರದ ಬದಲಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿವೆ. ಆದರೆ, ಅವರೆಲ್ಲರೂ ತಮ್ಮ ಮನೆಗಳನ್ನು ಸಂಪೂರ್ಣ ಕೆಡವಿ ಮರು ನಿರ್ವಿುಸಿಕೊಂಡಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಪ್ರವಾಹದಲ್ಲಿ ಹಾನಿಯಾದ ಜಿಲ್ಲೆಯ 281 ಶಾಲೆಗಳ 720 ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿತ್ತು. ಈ ಎಲ್ಲ ಶಾಲಾ ಕೊಠಡಿಗಳ ದುರಸ್ತಿಗಾಗಿ ಈಗಾಗಲೇ ಶಾಲಾ ಎಸ್​ಡಿಎಂಸಿ ಖಾತೆಗಳಿಗೆ ಅನುದಾನ ಜಮೆಯಾಗಿದ್ದು, ದುರಸ್ತಿ ಕಾರ್ಯ ಮುಂದುವರೆದಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ, ಡಿವೈಎಸ್ಪಿ ಶಿವಾನಂದ ಕಟಗಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ, ಸಿಪಿಐ ಡಿ.ಬಿ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಕಂದಾಯ ನೀರಿಕ್ಷಕ ಬಸವರಾಜ ಕಾತ್ರಾಳ, ಪ್ರಭುಲಿಂಗಪ್ಪ ಯಲಿಗಾರ, ಶಿವುಕುಮಾರ ಶೆಟ್ಟರ್, ಎ.ಆರ್.ಭೋವಿ ಉಪಸ್ಥಿತರಿದ್ದರು.

ರೈತರ ಉತ್ಪನ್ನ ಖರೀದಿಗೆ ಆಗ್ರಹ: ತಾ.ಪಂ. ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ ಮಾತನಾಡಿ, ಪ್ರಸಕ್ತ ವರ್ಷ ತಾಲೂಕಿನಾದ್ಯಂತ ಸಾಕಷ್ಟು ಪ್ರಮಾಣದ ರೈತರು ಗೋವಿನಜೋಳ ಬೆಳೆದಿದ್ದಾರೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರ ಎಲ್ಲ ಉತ್ಪನ್ನ ಖರೀದಿಸಬೇಕು. ಅಲ್ಲದೆ, ಪಟ್ಟಣದ ಕೇಂದ್ರ ಉಗ್ರಾಣ ನಿಗಮದಲ್ಲಿ ದಾಸ್ತಾನು ಮಾಡಿಕೊಳ್ಳಲು ಸ್ಥಳಾವಕಾಶವಿಲ್ಲ ಎಂಬ ಸಬೂಬು ನೀಡಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಇದೀಗ ಅಕಾಲಿಕ ಮಳೆಯಿಂದಾಗಿ ರೈತರೆಲ್ಲ ತಮ್ಮ ಉತ್ಪನ್ನಗಳನ್ನು ಸಂರಕ್ಷಿಸಿಕೊಳ್ಳಲು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ರೈತರ ಎಲ್ಲ ಉತ್ಪನ್ನಗಳ ದಾಸ್ತಾನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸೂಚಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಗೋವಿನಜೋಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ. ಕೇಂದ್ರ ಉಗ್ರಾಣ ನಿಗಮದಲ್ಲಿ ರೈತರ ಉತ್ಪನ್ನ ದಾಸ್ತಾನು ಮಾಡಿಕೊಳ್ಳಲು ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿ

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ಮತ್ತೊಂದು ಸೋಂಕಿತ ಪ್ರಕರಣವಾಗಿದ್ದರಿಂದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಬೇಕು. ತಾಲೂಕಾಡಳಿತ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವ, ಆರೋಗ್ಯ ಮತ್ತು ರೈತರ ಕೃಷಿ ಕಾರ್ಯಗಳಿಗೆ ವಿನಾಯಿತಿ ಹೊರತುಪಡಿಸಿ ವಿನಾಕಾರಣ ಸಚರಿಸುವವರ ಮೇಲೆ ನಿಗಾವಹಿಸಬೇಕು ಎಂದು ಜಿಲ್ಲಾ ಉಪ ವಿಭಾಗಾಧಿಕಾರಿ ರಾಯಪ್ಪ ಮೆಣಸಿಗಿ ಹೇಳಿದರು.

ಗುರುವಾರ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಎಪಿಎಂಸಿ, ಚೆಕ್​ಪೋಸ್ಟ್, ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲೂ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಈ ಬಗ್ಗೆ ಯಾರೂ ನಿರ್ಲಕ್ಷ ಮಾಡಬಾರದು. ಮೇ 3 ರವರೆಗೆ ಲಾಕ್​ಡೌನ್ ಮುಂದುವರಿಸಲಾಗಿದ್ದು ರೈತರ ಅನುಕೂಲಕ್ಕಾಗಿ ಎಪಿಎಂಸಿಯಲ್ಲಿ ವಹಿವಾಟು ಆರಂಭಿಸಿದ್ದರೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಎಪಿಎಂಸಿಯವರು, ವರ್ತಕರು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರ, ಹಮಾಲರ ಆರೋಗ್ಯ ಕಾಪಾಡಬೇಕು. ಎಪಿಎಂಸಿ ಮತ್ತು ದಲಾಲರ ಅಂಗಡಿಗಳಲ್ಲಿ ನೀರು, ಸ್ಯಾನಿಟೈಸರ್ ಇಡಬೇಕು. ರೈತರಿಗೆ ಇವುಗಳನ್ನು ಉಪಯೋಗಿಸುವಂತೆ, ಮಾಸ್ಕ್ ಧರಿಸುವಂತೆ ತಿಳಿಸಿ ಹೇಳಬೇಕು ಎಂದರು.

ಈ ವೇಳೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ತಾಲೂಕಾಡಳಿತದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ ಎಂಪಿಎಂಸಿಯಲ್ಲಿ ಈಗಾಗಲೇ ಮುಂಜಾಗೃತಾ ಕ್ರಮ ಕೈಗೊಂಡ ಬಗ್ಗೆ ತಿಳಿಸಿದರು. ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪಿಎಸ್​ಐ ಶಿವಯೋಗಿ ಲೋಹಾರ, ವರ್ತಕರ ಸಂಘದ ಕಾರ್ಯದರ್ಶಿ ಶಿವಲಿಂಗಪ್ಪ ಕಾಳಪ್ಪನವರ, ಮಂಜುನಾಥ ಮುದಗಲ್ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net