ಜಿಲ್ಲಾಧಿಕಾರಿಗೆ ದೂರಿನ ಸುರಿಮಳೆ : ಗುಡಿಬಂಡೆ ತಾಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯ

1
Published on

ಗುಡಿಬಂಡೆ: ನಗರದ ತಾಲೂಕು ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ಆರ್‌ಆರ್‌ಟಿ, ಭೂ ದಾಖಲೆಗಳ ಅಭಿಲೇಖಾಲಯ, ಪಿಂಚಣಿ ವಿಭಾಗ, ಚುನಾವಣೆ ವಿಭಾಗ, ಸರ್ವೇ ಇಲಾಖೆ ಸೇರಿ ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲನೆ ನಡೆಸಿದರು.

ಸಾರ್ವಜನಿಕರ ಅರ್ಜಿಗಳ ಪ್ರಗತಿಯ ಮಾಹಿತಿ ಪರಿಶೀಲಿಸಿ, ಕಡತಗಳನ್ನು ಸರಿಯಾಗಿ ನಿರ್ವಹಿಸದ ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವಲ್ಲಿ ತಡ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಸಾರ್ವಜನಿಕರ ಕೆಲಸ ಮಾಡುವಂತೆ ಸೂಚಿಸಿದರು. ತಹಸೀಲ್ದಾರ್ ಸಿಗ್ಬತ್ ಉಲ್ಲಾ, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.

ಹರಿದು ಬಂದ ದೂರುಗಳು: ತಾಲೂಕು ಕಚೇರಿಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ಅತಿ ಹೆಚ್ಚು ಒತ್ತುವರಿ ಮಾಡಿಕೊಂಡಿರುವ ರಸ್ತೆಗಳನ್ನು ನಕಾಶೆಯ ಪ್ರಕಾರ ತೆರವು ಮಾಡಿಸಬೇಕು. ಸೂಕ್ತ ದಾಖಲೆ ನೀಡುವಲ್ಲಿ ಅಧಿಕಾರಿಗಳು ವಿಳಂಭ ಮಾಡುತ್ತಿರುವುದು, ಕುಂಟೆಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಹಾಗೂ ಪ.ಪಂ. ವತಿಯಿಂದ ನೀಡಿರುವ ಹಕ್ಕುಪತ್ರದಂತೆ ಜಾಗ ಗುರುತಿಸುವಿಕೆ, ಎಲ್ಲೋಡು ಗ್ರಾಮದಲ್ಲಿ ವಾಲ್ಮೀಕಿ ಭವನಕ್ಕೆ ನೀಡಿರುವ ಜಾಗದ ಒತ್ತುವರಿ, ಉಪ್ಪಾರಹಳ್ಳಿಯಲ್ಲಿ ಚಿರತೆ ಹಾವಳಿ ಬಗ್ಗೆ ದೂರುಗಳು ನೀಡಿದ್ದು, ಸಾರ್ವಜನಿಕರ ದೂರುಗಳನ್ನು ಒಂದೊಂದಾಗಿ ಪರಿಶೀಲಿಸಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ತಾಲೂಕು ಕಚೇರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹಕ್ಕಿಪಿಕ್ಕಿ ಜನಾಂಗಕ್ಕೆ ಸೂಕ್ತ ನಿವೇಶನ ನೀಡಿ: ತಾಲೂಕಿನ ರೂರಲ್ ಗುಡಿಬಂಡೆಯಲ್ಲಿ ಹಕ್ಕಿ ಪಿಕ್ಕಿ ಜನಾಂಗದ 30ಕ್ಕೂ ಹೆಚ್ಚು ಕುಟುಂಬಗಳು ವಾಸವಿರುವ ಜಾಗವನ್ನು ನಮಗೆ ನೀಡಿ ಎಂದು ಹಕ್ಕಿ ಪಿಕ್ಕಿ ಜನಾಂಗದವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಯಾವುದೇ ತಕರಾರು ಇಲ್ಲದಿದ್ದರೆ ಅದೇ ಜಾಗದಲ್ಲಿ ನಿವೇಶನ ನೀಡಿ ಅಥವಾ ಪ್ರತ್ಯೇಕ ಜಾಗ ಗುರುತಿಸಿ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ತಹಸೀಲ್ದಾರ್ ಸಿಗ್ಬತ್ ಉಲ್ಲಾ ಅವರಿಗೆ ಸೂಚಿಸಿದರು.

ರಾಜಸ್ವ ನಿರೀಕ್ಷಕರ ವಿರುದ್ಧ ಗರಂ: ಸೊಮೇನಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕ ರವಿಕುಮಾರ್ ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದರಿಂದ ಕಡತಗಳನ್ನು ವಿಲೆವಾರಿ ಮಾಡಲು ಆಗುತ್ತಿಲ್ಲ. ಕಡತಗಳು ವಿಲೇವಾರಿ ಮಾಡುವಂತೆ ಅನೇಕ ಬಾರಿ ಸೂಚಿಸಿದರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಹಸೀಲ್ದಾರ್ ಸಿಗ್ಬತ್ ಉಲ್ಲಾ ಜಿಲ್ಲಾಧಿಕಾರಿಗೆ ದೂರಿದರು. ನಾಳೆ ಅಧಿಕಾರಿಗಳು ನಿಮ್ಮ ಬಳಿ ಇರುವ ಕಡತಗಳನ್ನು ಪರಿಶೀಲಿಸಿ ನನಗೆ ವರದಿ ನೀಡುತ್ತಾರೆ. ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಆರ್.ಲತಾ ರಾಜಸ್ವ ನಿರೀಕ್ಷಕ ರವಿಕುಮಾರ್ ವಿರುದ್ಧ ಗರಂ ಆದರು.

ಆರ್‌ಆರ್‌ಟಿ ಬಿಟ್ಟರೇ ಬೇರೆ ವಿಭಾಗಗಳಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಸ್ವಲ್ಪ ಚುರುಕಿನಿಂದ ಜನರ ಕೆಲಸ ಮಾಡಿಕೊಡಬೇಕು. ಒತ್ತುವರಿ ತೆರವು , ನಿವೇಶನ ಹಂಚಿಕೆ ಸೇರಿ ಇನ್ನು ಹಲವು ದೂರುಗಳು ಸಾರ್ವಜನಿಕರಿಂದ ಬಂದಿದ್ದು. 2 ವಾರದ ಒಳಗಾಗಿ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆರ್.ಲತಾ, ಜಿಲ್ಲಾಧಿಕಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net