

ಅರಸೀಕೆರೆ: ಜನರ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವಿನೂತನ ವೇದಿಕೆಯಾಗಿದೆ ಎಂದು ತಹಸೀಲ್ದಾರ್ ವಿಭಾ ವಿ ರಾಥೋಡ್ ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ತಾಲೂಕಿನ ತಳಲೂರು ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿದರು .ಪಹಣಿ ತಿದ್ದುಪಡಿ ,ಮ್ಯುಟೇಷನ್, ವಿಧವಾ ವೇತನ, ಅಂಗವಿಕಲರ ಪಿಂಚಿಣಿ ಸೇರಿ ಹತ್ತು ಹಲವು ದಾಖಲೆ ಪಡೆಯಲು ಸ್ರಮ ತಪ್ಪಿದಂತಾಗಿದೆ. ಅಧಿಕಾರಿ ವರ್ಗ ಇನ್ನಷ್ಟು ಕ್ರಿಯಾಶೀಲರಾಗಿ ಜನರ ಕುಂದು ಕೊರತೆಗಳಿಗೆ ಸ್ಪಂದಿಸಿ ಸರ್ಕಾರದ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಬೇಕು ಎಮದು ಕರೆ ನೀಡಿದರು.
ರೈತಸಂಘದ ಮುಖಂಡ ಮಧುಸೂಧನ್ ಮಾತನಾಡಿ, ಸೆಸ್ಕ್ ಅಧಿಕಾರಿಗಳು ವಿದ್ಯುತ್ ಪರಿವರ್ತಕ ನೀಡಲು ಸತಾಯಿಸುತ್ತಿದ್ದಾರೆ. ಅಣ್ಣಾಪುರ,ಈರಾಪುರ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಬೋನು ಇರಿಸಿ ಜನರ ಆತಂಕ ದೂರಮಾಡಬೇಕು ಎಂದರು.
ನಿವೇಶನ ಹಂಚಿಕೆ, ನಿರ್ಮಾಣ ಹಂತದ ಮನೆಗಳಿಗೆ ಅನುದಾನ ನೀಡುವುದು ಸೇರಿ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಶಾಸಕ ಕೆಂ.ಎಂ.ಶಿವಲಿಂಗೇಗೌಡ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಕುರಿತು ಕೇಳಿ ಬಂದ ನಾಗರಿಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ತಾಪಂ ಇಒ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೋಡಿಹಳ್ಳಿ ರಘು, ಲಾವಣ್ಯ, ರಮೇಶ್,ಈರಣ್ಣ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.