

ಮಂಗಳೂರು: ಸ್ಟೇಟ್‌ಬ್ಯಾಂಕ್‌ನ ಸರ್ವಿಸ್ ಬಸ್ ತಂಗುದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ, ಸದ್ಯ 5 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ಲಿಸಲು ಬಿಡುತ್ತಿಲ್ಲ. ಇದರಿಂದ ಸಾರ್ವಜನಿಕರು ಬವಣೆ ಪಡುವುದು ಇನ್ನೂ ತಪ್ಪಿಲ್ಲ.
ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಆರ್‌ಟಿಒ ಕೊನೇ ಸ್ಟಾಪ್ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪವಾಗಿ ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ತಂಗುದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶ ನೀಡಬೇಕು. ಅವಕಾಶ ನಿರಾಕರಣೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಿದ್ದರು.
ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ ಮೊದಲಾದ ಕಡೆಗಳಿಂದ ಸ್ಟೇಟ್‌ಬ್ಯಾಂಕ್‌ಗೆ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಆರ್‌ಟಿಒ ಕಚೇರಿ ಎದುರು ಕೊನೇಯ ಸ್ಟಾಪ್ ಆಗಿದೆ. ಜಿಲ್ಲಾಧಿಕಾರಿ ಸೂಚನೆ ಬಳಿಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು 5 ನಿಮಿಷವಷ್ಟೇ ಸಮಯಾವಕಾಶ ನೀಡಲಾಗುತ್ತಿದೆ. ಉಳಿದ ಬಸ್‌ಗಳೆಲ್ಲವನ್ನೂ ಆರ್‌ಟಿಒ ಎದುರಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದೆ.
ಬಸ್ ತಂಗುದಾಣ ಕಾಮಗಾರಿ ನಡೆಯುತ್ತಿರುವುದು ನಿಜ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸುವುದು ಸರಿಯಲ್ಲ. ಅಲ್ಲಿ ಖಾಸಗಿಯವರಿಗೂ ಇಂತಿಷ್ಟೇ ಬಸ್ ನಿಲ್ಲಿಸಬೇಕು ಎಂದು ಹಂಚಿಕೆಯಾಗಿಲ್ಲ. ಆದರೂ ಖಾಸಗಿ ಬಸ್ ಲಾಬಿ ಕೆಎಸ್‌ಆರ್‌ಟಿಸಿಗೆ ವಿನಾ ಕಾರಣ ತೊಂದರೆ ಉಂಟು ಮಾಡುತ್ತಿದೆ. ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್‌ಗೆ ಅವಕಾಶ ಇಲ್ಲದಿದ್ದರೂ ಸರ್ವಿಸ್ ಬಸ್ ತಂಗುದಾಣದಲ್ಲಿ ಪಾರ್ಕ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಆರೋಪಿಸಿದ್ದಾರೆ.
ಎಲ್ಲ ಸರ್ಕಾರಿ ಬಸ್‌ಗಳು ಈಗಲೂ ಆರ್‌ಟಿಒ ಕಚೇರಿ ಎದುರು ಸಾಲಾಗಿ ನಿಲ್ಲುತ್ತಿವೆ. ಸ್ಟೇಟ್‌ಬ್ಯಾಂಕ್‌ಗೆ ಟಿಕೇಟ್ ಪಡೆದು ಪ್ರಯಾಣಿಸಿದ ಪ್ರಯಾಣಿಕರು ಒಂದು ಸ್ಟಾಪ್ ಮುಂಚಿತವಾಗಿ ಆರ್‌ಟಿಒ ಕಚೇರಿ ಎದುರಲ್ಲೇ ಇಳಿಯಬೇಕಾಗಿದೆ. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ, ಸ್ಟೇಟ್‌ಬ್ಯಾಂಕ್‌ಗೆ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಹಿರಿಯರು, ಮಹಿಳೆಯರಿಗೆ, ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.