ಜಿಲ್ಲಾಧಿಕಾರಿ ಕಚೇರಿಯಲ್ಲೇ ಸ್ವಚ್ಛತೆ ಮಾಯ!

13Jaggu2
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ 2ನೇ ಮಹಡಿಯಲ್ಲಿ ಎಲೆ-ಅಡಿಕೆ ತಿಂದು ಉಗುಳಿರುವುದು.
Published on

ಬೆಳಗಾವಿ: ದಿನ ನಿತ್ಯ ಸಾವಿರಾರು ಸಾರ್ವಜನಿಕರು ಭೇಟಿ ನೀಡುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತೆ ಮಾಯವಾಗಿದ್ದು, ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯ ಕಚೇರಿಗಳಲ್ಲಿ ಎಲ್ಲೆಂದರಲ್ಲಿ ಕಸ ಕಣ್ಣಿಗೆ ರಾಚುತ್ತಿದೆ. ಅಲ್ಲದೆ, ಇಲ್ಲಿರುವ ಆಸನಗಳು ಮುರಿದು ಹೋಗಿದ್ದು, ಅಧಿಕಾರಿಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ನಾಗರಿಕರಿಗೆ ತೊಂದರೆಯಾಗಿದೆ. ಗೋಡೆಗಳಿಗೆ ಎಲೆ-ಅಡಿಕೆ, ಗುಟ್ಖಾ ತಿಂದು ಉಗುಳಿದ ಕಲೆಗಳು ಅಂಟಿಕೊಂಡಿದ್ದು, ಸಾರ್ವಜನಿಕರು ಮೂಗು ಮುರಿಯುವಂತಾಗಿದೆ.

ಸ್ವಚ್ಛತೆ ಮರೀಚಿಕೆ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಇಲ್ಲಿ ಸೇವಾ ಸಿಂಧು-ಗ್ರಾಮ ಒನ್‌ನ ಜಿಲ್ಲಾ ಸಮಾಲೋಚಕರ ಕಚೇರಿ ಇದೆ. ಅಟಲ್‌ಜಿ ಜಿಲ್ಲಾ ಸಮಾಲೋಚಕರ ಕಚೇರಿ, ಅಟಲ್ ಜಿ ಜನಸ್ನೇಹಿ ಕೇಂದ್ರ (ನಾಡ ಕಚೇರಿ), ಭೂಮಿ, ಸರ್ವೇ ಅಧಿಕಾರಿಗಳ ಕಚೇರಿ ಇದೆ. ಪ್ರತಿನಿತ್ಯ ಸಾರ್ವಜನಿಕರು ತಮ್ಮ ಕೆಲಸ-ಕಾರ್ಯಗಳಿಗೆ ಬಂದು ಹೋಗುತ್ತಾರೆ. ಕಚೇರಿ ನೋಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಚಿತ್ವ ಇಲ್ಲ ಎಂದು ಉದ್ಗಾರ ತೆಗೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎರಡನೇ ಮಹಡಿಯಲ್ಲೇ ಅಧಿಕಾರಿಗಳ ಸಭಾಂಗಣ ಇದೆ. ನಿತ್ಯ ಹಲವಾರು ಸಭೆ ಮಾಡುವ ಅಧಿಕಾರಿಗಳಿಗೆ ಅವ್ಯವಸ್ಥೆ ಕಾಣಿಸುತ್ತಿಲ್ಲ. ಎಲ್ಲೆಂದರಲ್ಲಿ ಬಿಸಾಕಿರುವ ಮುರುಕು ಕುರ್ಚಿ, ಇತರ ವಸ್ತುಗಳನ್ನು ವಿಲೇವಾರಿ ಮಾಡಿ, ವ್ಯವಸ್ಥಿತವಾಗಿ ಆಸನಗಳ ವ್ಯವಸ್ಥೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net