ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾರ್ ರೂಂ ; ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪನೆ

DSC_4996
Published on

ತುಮಕೂರು : ಕರೊನಾ ಸೋಂಕಿನ ಸಂಭಾವ್ಯ 3ನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯ ನಿವಾಸಿಗಳ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರದಿಂದಲೇ ಕರೊನಾ ವಾರ್ ರೂಂ ಆರಂಭಿಸಲಾಗಿದೆ.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ವಾರ್ ರೂಂಗೆ ಚಾಲನೆ ನೀಡಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕು ದೃಢಪಟ್ಟ ರೋಗಿಗಳ ಜತೆ ಮಾತನಾಡಿ ಚಿಕಿತ್ಸೆ, ಹಾಸಿಗೆ ಸೌಲಭ್ಯ ಒದಗಿಸುವುದು ವಾರ್ ರೂಂ ಕಾರ್ಯವಾಗಿರಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದಕ್ಕೆ ತಕ್ಕಂತೆ ಈ ಕೇಂದ್ರದ ಸಿಬ್ಬಂದಿಯ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಸೋಮವಾರದ ನಂತರ ವಾರ್ ರೂಂ ಆರಂಭಿಸಲಾಗುತ್ತದೆ. ಆಯಾ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ಸ್ಥಳೀಯ ಸಂಸ್ಥೆಗಳು ಕೂಡ ವಾರ್ ರೂಂ ಆರಂಭಿಸಬೇಕು, ಆಸ್ಪತ್ರೆಗಳ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ಲಭಿಸುವಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಶೇ.50 ಹಾಸಿಗೆಗಳು ಮೀಸಲು: ರೋಗಿಗಳಿಗೆ ಚಿಕಿತ್ಸೆ ನೀಡಲು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಸ್ಪತ್ರೆ ಸಾಮರ್ಥ್ಯದ ಶೇ.50 ಹಾಸಿಗೆ (ಐಸಿಯು, ಆಕ್ಸಿಜನ್ ಬೆಡ್, ಜನರಲ್ ವಾರ್ಡ್ ವಿಭಾಗ) ಮೀಸಲಿಡಬೇಕು. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಜ.10ರಿಂದ ಎಲ್ಲ ವಿಭಾಗಗಳಲ್ಲೂ ಶೇ.75 ಹಾಸಿಗೆ ಲಭ್ಯವಿರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್, ಎಡಿಸಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ. ಅಜಯ್, ತಹಸೀಲ್ದಾರ್ ಮೋಹನಕುಮಾರ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net