

ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ಸಂಕೀರ್ಣವನ್ನು ನಗರದ ಹೊರವಲಯದಲ್ಲಿ ನಿರ್ಮಿಸುವ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಬಿಜೆಪಿ ಸರ್ಕಾರ ಇಲ್ಲಿ ಕಟ್ಟಡ ನಿರ್ಮಿಸಲು ತರಾತುರಿಯಿಂದ ನಿರ್ಧರಿಸಿದೆ. ನಗರದಿಂದ 5-6 ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೆ ಬಂದು ಹೋಗುವುದು ಸಾರ್ವಜನಿಕರಿಗೂ ತೊಂದರೆಯಾಗಲಿದೆ. ಆದರೆ ಈಗಾಗಲೇ ಕಟ್ಟಡ ತಲೆ ಎತ್ತಿದೆ. ಅಂದಾಜು 25 ಕೋಟಿ ರೂ.ವೆಚ್ಚದ ಈ ಯೋಜನೆಗೆ ಈಗಾಗಲೇ 46 ಕೋಟಿ ರೂ.ಖರ್ಚಾಗಿದೆ. ಈ ಹಿಂದೆ ರೂಪಿಸಿದ್ದ ಪ್ಲಾೃನ್‌ನಲ್ಲಿ ಅಗ್ನಿನಿಯಂತ್ರಕ ವ್ಯವಸ್ಥೆ, ಕುಡಿವ ನೀರು, ಕ್ಯಾಂಟಿನ್, ಸಂಪರ್ಕ ರಸ್ತೆ,ಪಾರ್ಕಿಂಗ್, ಕೊರೆದಿರುವ ಗುಡ್ಡಕ್ಕೆ ರಕ್ಷಣಾ ಗೋಡೆ, ಇಂಟಿರಿಯರ್, ಫರ್ನಿಚರ್ಸ್ ಇತ್ಯಾದಿ ಇನ್ನೂ ಹಲವು ಕಾಮಗಾರಿಗಳಿಗೆ ಯೋಜನೆ ಮತ್ತು ಅಂದಾಜು ಪಟ್ಟಿಯನ್ನೇ ಸಿದ್ಧಪಡಿಸಿಲ್ಲ. ಈ ಎಲ್ಲ ಉಳಿಕೆ ಕಾಮಗಾರಿಗಳಿಗೆ ಅಂದಾಜು 15 ಕೋಟಿ ರೂ.ಅಗತ್ಯವಿದೆ.
ಶುಕ್ರವಾರದ ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಗಮನಕ್ಕೆ ತರುವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅನು ದಾನ ಬಿಡುಗಡೆಗೆ ಮನವಿ ಮಾಡುತ್ತೇನೆ. ಆರು ತಿಂಗಳೊಳಗೆ ಸಾರ್ವಜನಿಕ ಸೇವೆಗೆ ಈ ಕಟ್ಟಡವನ್ನು ಸಂಪೂರ್ಣಗೊಳಿಸುವ ಗುರಿ ಇದೆ ಎಂದರು.
ಕಳೆದ 2022 ಮೇನಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ ಯೋಜನೆಯಂತೆ ಕಟ್ಟಡ ಪೂರ್ಣಗೊಂಡಿಲ್ಲ. ಕಾಮಗಾರಿ ತ್ವರಿತ ವಾಗಿ ಪೂರ್ಣಗೊಳಿಸದಿದ್ದರೆ ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡುವುದಾಗಿ ಈ ಸಂದರ್ಭದಲ್ಲಿ ಕಟ್ಟಡದ ಗುತ್ತಿಗೆದಾರ ಪಾಲಾಕ್ಷಯ್ಯ ಅವರಿಗೆ ಸಚಿವರು ಎಚ್ಚರಿಸಿದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಚಂದ್ರಪ್ಪ ಮತ್ತಿತರರು ಇದ್ದರು.
ಮತ್ತೊಂದು ಉಪವಿಭಾಗಾಧಿಕಾರಿ ಕಚೇರಿ
ಜಿಲ್ಲೆಗೆ ಅಗತ್ಯವಿರುವ ಮತ್ತೊಂದು ಉಪವಿಭಾಗಾಧಿಕಾರಿ ಕಚೇರಿಯನ್ನು ಪ್ರಾರಂಭಿಸುವ ಕುರಿತು ಕಂದಾಯ ಸಚಿವರೊಂದಿಗೆ ಚರ್ಚಿಸುತ್ತೇನೆ. ಆದರೆ ಅದನ್ನು ಹಿರಿಯೂರು ಅಥವಾ ಚಳ್ಳಕೆರೆಯಲ್ಲಿ ಸ್ಥಾಪಿಸುವ ಕುರಿತು ಸರ್ಕಾರವೇ ನಿರ್ಧರಿಸಬೇಕೆಂದ ಸುಧಾಕರ್, ಡಿಸಿ ಕಚೇರಿ ಹೊಸ ಕಟ್ಟಡ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಿತ ಹಲವು ಇಲಾಖೆಗಳ ಜಿಲ್ಲಾಮಟ್ಟದ ಇಲಾಖೆಗಳ ಕಚೇರಿಗಳು ಕಾರ‌್ಯಾರಂಭ ಮಾಡಿದರೂ ಎಸಿ ಕಚೇರಿ ಚಿತ್ರದುರ್ಗ ನಗರದೊಳಗೆ ಇರಲಿದೆ ಎಂದರು.