

ಹಾಸನ: ಬರಗಾಲದ ಸಂದರ್ಭದಲ್ಲಿ ಅಲ್ಪ-ಸ್ವಲ್ಪ ಬೆಳೆದಿರುವ ಜೋಳವನ್ನು ಕೆಎಂಎಫ್ ಮೂಲಕ ನೇರವಾಗಿ ಖರೀದಿ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು, ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಜೋಳ ಸುರಿದು ಸೋಮವಾರ ಪ್ರತಿಭಟನೆ ನಡೆಸಿದರು.
ದಲ್ಲಾಳಿಗಳ ಮೂಲಕ ಕೆಎಂಎಫ್ ಜೋಳವನ್ನು ಖರೀದಿಸಲು ಮುಂದಾಗುತ್ತದೆ. ಅದರ ಬದಲಾಗಿ ನೇರವಾಗಿ ರೈತರಿಂದಲೇ ಖರೀದಿ ಮಾಡುವ ಮೂಲಕ ಅವರ ಸಂಕಷ್ಟದಲ್ಲಿ ನೆರವಾಗಬೇಕು. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಎಲ್ಲ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಅಲ್ಪ-ಸಲ್ಪ ಮಳೆಯಲ್ಲಿ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆದಿರುವಂತಹ ರಾಗಿ ಮತ್ತು ಜೋಳವನ್ನು ನೇರವಾಗಿ ಸರ್ಕಾರವೇ ಕೆಎಂಎಫ್ ಮೂಲಕ ಖರೀದಿ ಖರೀದಿಸಬೇಕು ಎಂದು ಎಚ್.ಡಿ. ರೇವಣ್ಣ ಅವರು ಆಗ್ರಹಿಸಿದರು.
ಪಶು ಆಹಾರ ಉತ್ಪಾದನೆಗೆ ಪ್ರಮುಖವಾಗಿ ಜೋಳ ಬೇಕಾಗುತ್ತದೆ. ಇದನ್ನ ದಲ್ಲಾಳಿಗಳ ಮೂಲಕ ಖರೀದಿ ಮಾಡುತ್ತಾರೆ. ಇದರಿಂದ ಕೋಟ್ಯಂತರ ರೂಪಾಯಿ ದಲ್ಲಾಳಿಗಳ ಪಾಲಾಗುತ್ತದೆ. ಆದ್ದರಿಂದ ಕೆಎಂಎಫ್ ನೇರವಾಗಿಯೇ ರೈತರಿಗೆ ಹೆಚ್ಚಿಗೆ ಹಣ ನೀಡಿ ಜೋಳ ಖರೀದಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಮಾಡಬೇಕು. ಇದರಿಂದ ರೈತರಿಗೆ ನೆರವಾಗಲಿದೆ. ರೈತರಿಂದ ಖರೀದಿ ಮಾಡುವಂತೆ ನಾನೇ ಈ ಹಿಂದೆ ಹಾಲು ಮಹಾಮಂಡಲದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ ಇದುವರೆಗೂ ಅದನ್ನು ಮಾಡದೆ ಟೆಂಡರ್ ಕರೆಯಲಾಗುತ್ತಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹೇಮಾವತಿ ಜಲಾಶಯದಿಂದ ನೀರನ್ನು ಬಿಡಲಾಗಿದೆ. ಆದರೆ ಸಲಹಾ ಸಮಿತಿ ಸಭೆಯನ್ನು ಕರೆಯದೆ ಏಕ ಪಕ್ಷಯವಾಗಿ ನಡೆದುಕೊಂಡಿದ್ದಾರೆ. ಈಗ ನೀರಿಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆಯೂ ಇಲ್ಲದೆ ಬರಗಾಲದ ಛಾಯೆ ಆವರಿಸಿದ್ದು ಸರ್ಕಾರ ಹೆಚ್ಚಿನ ಪರಿಹಾರ ಘೋಷಣೆ ಮಾಡಬೇಕು ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಮುಖಂಡರಾದ ಎಸ್. ದೇವೇಗೌಡ ಸತ್ಯನಾರಾಯಣ್, ದುದ್ದ ಲಕ್ಷ್ಮಣ್, ಸಿ.ಆರ್. ಶಂಕರ್, ಹೊಂಗರೆ ರಘು, ವಾಸುದೇವ್, ಅಮೀರ್ ಜಾನ್, ಅಕ್ಬರ್, ಕ್ರಾಂತಿ, ಗಂಗಾಧರ್, ಸ್ವಾಮಿಗೌಡ, ಅಗಿಲೆ ಮೊಗಣ್ಣಗೌಡ ಹಾಗೂ ಇತರರು ಇದ್ದರು.