ಜಿಲ್ಲಾದ್ಯಂತ ಸ್ಕಂದ ಮಾತಾ ಆರಾಧನೆ

Ekanatheshwari Devi
Published on

ಚಿತ್ರದುರ್ಗ: ಪದ್ಮಾಸನರೂಢ ಜಗನ್ಮಾತೆಯಾದ ಸ್ಕಂದ ದೇವಿಯ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಸೋಮವಾರ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿತು.

ಶರನ್ನವರಾತ್ರಿ ಮಹೋತ್ಸವದ ಐದನೇ ದಿನದ ಪೂಜೆಯೂ ಹಲವೆಡೆ ಅದ್ದೂರಿಯಾಗಿ ಜರುಗಿತು. ಸೂರ್ಯೋದಯಕ್ಕೂ ಮುನ್ನ ಮೊದಲ ಮಹಾಮಂಗಳಾರತಿ ಪಡೆಯಲು ಅನೇಕರು ದೇಗುಲಗಳಿಗೆ ಭೇಟಿ ನೀಡಿದ್ದರು. ದೇವಿಗೆ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಹಲವರು ಪ್ರಾರ್ಥಿಸಿಕೊಂಡರು.

ದೇಗುಲಗಳಲ್ಲಿ ಅಷ್ಟೋತ್ತರ, ಸಹಸ್ರನಾಮ ಸೇರಿ ದೇವಿ ಮಂತ್ರ ಪಠಣದೊಂದಿಗೆ ಸ್ಕಂದ ಮಾತೆಗೆ ಶ್ರದ್ಧಾ-ಭಕ್ತಿ ಸಮರ್ಪಿಸಲಾಯಿತು.

ಉಚ್ಚಂಗಿಯಲ್ಲಮ್ಮ ದೇವಿಗೆ ನೂರಾರು ನವಿಲು ಗರಿಗಳಿಂದ, ಕಾಳಿ ಕಮಠೇಶ್ವರಿ ದೇವಿಗೆ ವಿವಿಧ ತರಕಾರಿಗಳಿಂದ, ಬರಗೇರಮ್ಮ, ಏಕನಾಥೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆ ಮಾರಮ್ಮ ದೇವಿಗೆ ಪುಷ್ಪಗಳಿಂದ ಅಲಂಕಾರ ಸೇವೆ ನೆರವೇರಿತು.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚೌಡೇಶ್ವರಿ, ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ಚಾಮುಂಡೇಶ್ವರಿ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆ ಜರುಗಿದವು.

ತಾಲೂಕಿನ ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಗೆ ಸರ್ಪಾಲಂಕಾರ, ಬೊಗಳೇರಹಟ್ಟಿ ದುರ್ಗಾಂಬಿಕಾ ದೇವಿಗೆ ಹೂವಿನಿಂದ ಅಲಂಕರಿಸಲಾಗಿತ್ತು. ಅ. 8ರಂದು ಕಾತ್ಯಾಯನೀ ದೇವಿಯ ಆರಾಧನೆಯೊಂದಿಗೆ ಪೂಜೆಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net