

ಬೆಳಗಾವಿ: ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿ ಬುಧವಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಿತು. ಅಕ್ರಮ ತಡೆಗಟ್ಟುವುದಕ್ಕೆ ಇದೇ ಮೊದಲ ಬಾರಿ ‘ಸಿಇಟಿ ಪ್ರವೇಶ ಪತ್ರಕ್ಕೆ’ ಬಾರ್‌ಕೋಡ್ ಸ್ಕಾೃನರ್ ತಂತ್ರಜ್ಞಾನ ಅಳವಡಿಸಲಾಗಿತ್ತು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಸಂಬಂಧಿಸಿದಂತೆ ನಗರದಲ್ಲೇ 21 ಕೇಂದ್ರ ತೆರೆಯಲಾಗಿತ್ತು. ಬೆಳಗ್ಗೆ 10.30ರಿಂದ 11.50ರವರೆಗೆ ನಡೆದ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ 7,939 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 7,436 ಜನ ಪರೀಕ್ಷೆ ಬರೆದರೆ, 503 ವಿದ್ಯಾರ್ಥಿಗಳು ಗೈರಾದರು.
ಮಧ್ಯಾಹ್ನ 2.30ರಿಂದ 3.50 ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆಗೆ 7,939ರ ಪೈಕಿ 7,430 ವಿದ್ಯಾರ್ಥಿಗಳು ಹಾಜರಾದರೆ, 509 ಜನ ಗೈರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 28 ಕೇಂದ್ರಗಳಲ್ಲಿ ನಡೆದ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ 10,597 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 10,153 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 444 ಜನ ಗೈರಾದರು. ರಸಾಯನಶಾಸ್ತ್ರ ಪರೀಕ್ಷೆಗೆ 10,597ರ ಪೈಕಿ 10,152 ವಿದ್ಯಾರ್ಥಿಗಳು ಹಾಜರಾದರೆ, 445 ವಿದ್ಯಾರ್ಥಿಗಳು ಗೈರಾದರು.