ಜಿಲ್ಲಾದ್ಯಂತ ಸಂಭ್ರಮದ ವಿಜಯದಶಮಿ

Ambabhavani Devi
Published on

ಚಿತ್ರದುರ್ಗ: ವಿಜಯದ ಸಂಕೇತವಾದ ವಿಜಯದಶಮಿ ಹಬ್ಬದ ಸಂಭ್ರಮ ಶನಿವಾರ ಹಲವೆಡೆ ಮನೆಮಾಡಿತ್ತು. ಬನ್ನಿ ಮಹಾಕಾಳಿ ದೇವಿ ಸನ್ನಿಧಿ ಮುಂಭಾಗ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾದ್ಯಂತ ಅನೇಕರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಮನೆಗಳ ಮುಂಭಾಗ ಮಹಿಳೆಯರು ಮುಂಜಾನೆಯೇ ಬಿಡಿಸಿದ್ದ ವರ್ಣಮಯ ರಂಗೋಲಿಗಳು ಆಕರ್ಷಿಸಿದವು. ತಳಿರು, ತೋರಣಗಳಿಂದ ಹೊರ ಮತ್ತು ದೇವರ ಕೋಣೆಗಳನ್ನು ವಿಶೇಷವಾಗಿ ಅಲಂಕರಿಸಿದ್ದ ದೃಶ್ಯ ಕಂಡು ಬಂದಿತು.

ವಿವಿಧ ಬಗೆಯ ಪುಷ್ಪಗಳಿಂದ ಮನೆಗಳಲ್ಲಿನ ದೇವರ ಮೂರ್ತಿಗಳನ್ನು ಸಿಂಗರಿಸಿದ್ದರು. ಹೋಳಿಗೆ, ಪಾಯಸ, ವಡೆ ಸೇರಿ ತರಹೇವಾರಿ ಖಾದ್ಯಗಳನ್ನು ಮಡಿಯಿಂದ ತಯಾರಿಸಿ ದೇವರಿಗೆ ಎಡೆ ಸಮರ್ಪಿಸಿದರು.

ಬನ್ನಿ ಪೂಜೆ ವಿಶೇಷ: ನಗರದ ಹಲವೆಡೆ ಇರುವ ಬನ್ನಿ ಮರಗಳಿಗೆ ಸಂಜೆ ಪೂಜಿಸಿ, ಮನೆಗಳಲ್ಲಿನ ಹಿರಿಯರು-ಕಿರಿಯರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ಅಲ್ಲದೆ, ಅಕ್ಕಪಕ್ಕದ ಮನೆಯವರನ್ನು, ಸಂಬಂಧಿಕರನ್ನು ಕರೆದು ಫಲ-ತಾಂಬೂಲ ನೀಡಿ ಶುಭಾಶಯ ಕೋರಿದರು.

ಗಮನಸೆಳೆದ ಗೊಂಬೆಗಳು: ಶರನ್ನವರಾತ್ರಿ ಮಹೋತ್ಸವದಲ್ಲಿ ಮನೆಗಳಲ್ಲಿ ಗೊಂಬೆ ಕೂರಿಸುವ ಪರಂಪರೆ ಇದೆ. ಮೈಸೂರು ಮತ್ತು ವಿಜಯನಗರ ಅರಸರ ಕಾಲದಿಂದ ಆರಂಭವಾದ ಈ ಪದ್ಧತಿ ಚಿತ್ರದುರ್ಗಕ್ಕೂ ವಿಸ್ತರಿಸಿದೆ. ಇಲ್ಲಿಯೂ ತಮ್ಮ ಶಕ್ತ್ಯಾನುಸಾರ ಪ್ರತಿ ವರ್ಷ ಹೊಸ ಗೊಂಬೆಗಳನ್ನು ಖರೀದಿಸುವ ಮೂಲಕ ಅನೇಕರು ಮನೆಗಳಲ್ಲಿ ಒಂಬತ್ತು, ಐದು, ಮೂರು ದಿನ ಪ್ರತಿಷ್ಠಾಪಿಸಿ, ಪೂಜಿಸಿ ವಿಶೇಷವಾಗಿ ಆಚರಿಸಿದರು. ಆಕರ್ಷಕವಾಗಿ ಅಲಂಕರಿಸಿ ಹಲವರ ಗಮನ ಸೆಳೆದರು. ಮಾರನವಮಿ ಕೋಲಿಗೆ ಕೇಸರಿ ಬಣ್ಣದ ಕಾಗದಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.

ಆಕರ್ಷಿಸಿದ ವಾಹನಗಳು: ಆಯುಧ ಪೂಜೆ ಕೂಡ ಹಲವೆಡೆ ಸಡಗರದಿಂದ ಜರುಗಿತು. ದ್ವಿಚಕ್ರ ವಾಹನ, ಕಾರು, ಆಟೊ, ಟ್ರ್ಯಾಕ್ಟರ್, ಬಸ್ಸು, ಲಾರಿ, ಸೈಕಲ್ ಮತ್ತು ಎತ್ತಿನಗಾಡಿಗಳನ್ನು ಗಾತ್ರಕ್ಕೆ ಅನುಗುಣವಾಗಿ ಹೂವಿನ ಹಾರಗಳಿಂದ ಚಿತ್ತಾಕರ್ಷಕವಾಗಿ ಸಿಂಗರಿಸಲಾಗಿತ್ತು. ಕೌಶಲ ಹೊಂದಿರುವವರ ಬಳಿಯೂ ಕೆಲವರು ವಾಹನಗಳಿಗೆ ಅಲಂಕಾರ ಮಾಡಿಸಿಕೊಂಡ ದೃಶ್ಯ ಕಂಡು ಬಂದಿತು. ಕಚೇರಿ, ಕಾರ್ಖಾನೆ, ಗೋದಾಮು, ಅಂಗಡಿ-ಮುಂಗಟ್ಟು, ಯಂತ್ರೋಪಕರಣ, ಗ್ರಾಮೀಣ ಭಾಗಗಳ ಜಮೀನುಗಳಲ್ಲಿನ ಪಂಪ್‌ಸೆಟ್, ಕೃಷಿ ಪರಿಕರಗಳಿಗೂ ಪೂಜೆ ನೆರವೇರಿತು.

ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗದಲ್ಲಿ ಜನಪದ ಕಲೆಗಳು ವಿಶೇಷ ಸ್ಥಾನ ಪಡೆದಿವೆ. ಈ ಕಲೆಗೆ ಬಳಸುವ ಕಹಳೆ, ಡೊಳ್ಳು, ಉರುಮೆ, ತಮಟೆ, ಡ್ರಮ್‌ಸೆಟ್, ಕರಡಿ ಚಮ್ಮಳ ಸೇರಿ ಹಲವು ವಾದ್ಯಗಳನ್ನು ದೇವರ ಮುಂದಿಟ್ಟು ಪೂಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net