ಜಿಲ್ಲಾದ್ಯಂತ ವೈಭವ, ಸಂಭ್ರಮದ ಗಣೇಶೋತ್ಸವ

Ganeshothsava
Published on

ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ಕೋಟೆನಗರಿ ಸೇರಿ ಜಿಲ್ಲೆಯ ಅನೇಕ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸೋಮವಾರ ಗಣೇಶೋತ್ಸವ ಸಂಭ್ರಮ ಜೋರಾಗಿ ನಡೆಯಿತು. ಹೀಗಾಗಿ ವೈಭವಕ್ಕೂ ಸಾಕ್ಷಿಯಾಯಿತು.

ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಗಲ್ಲಿ-ಗಲ್ಲಿಗಳಲ್ಲೂ ಉತ್ಸವ ಕಳೆಗಟ್ಟಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿದ್ದ ಭವ್ಯ ಮಂಟಪಗಳ ಮುಂಭಾಗ ತಳಿರು-ತೋರಣ, ಕೇಸರಿ ವಸ್ತ್ರ, ವಿವಿಧ ಪುಷ್ಪಗಳಿಂದಲೂ ಸಿಂಗರಿಸಿ ಅದರೊಳಗೆ ವಿವಿಧ ರೂಪಗಳ ಗಣಪನ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯದಲ್ಲೂ ಸಡಗರ ಮನೆ ಮಾಡಿತ್ತು.

ಮಂಗಳವಾದ್ಯಗಳ ಸಮೇತ ಮಂಗಳಕರನಾದ ವಿಘ್ನ ನಿವಾರಕ ವಿನಾಯಕನ ಮೂರ್ತಿ ಸ್ವಾಗತಿಸಲು ಬೆಳಗ್ಗೆಯಿಂದಲೇ ಯುವಕರು, ಚಿಣ್ಣರು ಸಜ್ಜಾಗಿದ್ದರು. ಅತ್ಯಂತ ಉತ್ಸಾಹದಿಂದಲೇ ಪಾಲ್ಗೊಂಡು ಪ್ರತಿಷ್ಠಾಪಿಸಲು ಸ್ವಾಮಿಯನ್ನು ಕರೆದೊಯುತ್ತಿದ್ದ ದೃಶ್ಯ ಕಂಡು ಬಂದಿತು.

ಸಾವಿರಾರು ಮನೆಗಳ ಒಳಾಂಗಣ, ದೇವರ ಕೋಣೆಗಳಲ್ಲೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಹಾರ, ವಿವಿಧ ಪುಷ್ಪಗಳಿಂದ ಕಣ್ಮನ ಸೆಳೆಯುವಂತೆ ಸಿಂಗರಿಸಿದ್ದರು. ಮೊದಕ, ಕರಿಗೆಡುಬು, ವಡೆ, ಗಾರ್ಗಿ, ಅಪ್ಪಳ, ಸಂಡಿಗೆ, ಪುಳಿಯೋಗರೆ, ಚಿತ್ರಾಹ್ನ, ಪಾಯಸ, ಪಲ್ಯ, ಕೋಸುಂಬರಿ ಸೇರಿ ವಿವಿಧ ಹಣ್ಣುಗಳ ಸಮೇತ ನೈವೇದ್ಯ ಸಮರ್ಪಿಸುವ ಮೂಲಕ ಕುಟುಂಬ ಸಮೇತ ಹಬ್ಬವನ್ನು ಆಚರಿಸಿದರು.

54 ಸಾರ್ವಜನಿಕ ಸೇರಿ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾವಿರಾರು ಗಣೇಶ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಸ್ಥಳಗಳಲ್ಲಿ ಮೊದಲ ದಿನವೇ ವಿಸರ್ಜಿಸಲಾಯಿತು.

ಭಾವೈಕ್ಯತೆಯ ಗಣೇಶೋತ್ಸವ: ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸರ್ವ ಧರ್ಮಗಳ ನೌಕರರು ಸೇರಿ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಿಸಿದರು. ಬುದ್ಧ ಕಾಲನಿಯ ಬಿಸಿವೈ ಗಣಪತಿ, ಜೋಗಿಮಟ್ಟಿ ರಸ್ತೆಯ ಗಣಪತಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಸ್ಥಳೀಯರು ಒಗ್ಗೂಡಿ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net