

ಚಾಮರಾಜನಗರ: ಜಿಲ್ಲಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಯಿತು.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವ್ಯಾಪ್ತಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆಗಳಲ್ಲಿ ಹೆಣ್ಣು ಮಕ್ಕಳು ಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೊಸ ಸೀರೆ, ಆಭರಣ ತೊಡಿಸಿ, ವಿಭಿನ್ನ ರೀತಿಯಲ್ಲಿ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ವರಮಹಾಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಚಾಮರಾಜನಗರ ತಾಲೂಕಿನ ಚಂದಕವಾಡಿ, ನಾಗವಳ್ಳಿ, ನಲ್ಲೂರು, ಜ್ಯೋತಿಗೌಡನಪುರ, ಕಾಗಲವಾಡಿ, ಆಲೂರು, ಕೂಡ್ಲೂರು, ಹರದನಹಳ್ಳಿ, ಬಸವಪುರ, ವೆಂಕಟಯ್ಯನಛತ್ರ, ಬಸವಾಪುರ, ಮರಿಯಾಲ, ಹರವೆ, ಮಂಗಲ, ಬದನಗುಪ್ಪೆ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಮಹಿಳೆಯರು ಮುಂಜಾನೆಯನ್ನು ಬಾಳೆ, ಮಾವಿನ ಸೊಪ್ಪಿನ ತೋರಣಗಳಿಂದ ಸಿಂಗರಿಸಿದ್ದರು. ತಮ್ಮ ದೇವರ ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಹೂವು, ನೋಟು ಹಾಗೂ ನಾಣ್ಯಗಳಿಂದ ಸಿಂಗರಿಸಿ ಅಕ್ಕಪಕ್ಕದ ಮನೆಯವರನ್ನು ಆಹ್ವಾನಿಸಿ ವಿಶೇಷವಾಗಿ ಪೂಜೆಸಲ್ಲಿಸಿದರು. ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು.
ನಗರ ಪ್ರದೇಶದಲ್ಲೂ ಶ್ರೀವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಿದ್ದರು. ಹೊಸ ಸೀರೆ, ಆಭರಣ ತೊಟ್ಟ ಹೆಣ್ಣು ಮಕ್ಕಳು ಲಕ್ಷ್ಮೀ ಮೂರ್ತಿಯ ಅಲಂಕಾರವನ್ನು ವಿಶೇಷವಾಗಿ ಮಾಡಿದ್ದರು. ಕೆಲವರು ಕಳಶದ ಮೇಲೆ ವಿವಿಧ ಲೋಹಗಳಿಂದ ಮಾಡಿದ ಲಕ್ಷ್ಮೀ ದೇವಿಯ ಮುಖ ವಿಗ್ರಹವನ್ನಿಟ್ಟು ಪೂಜಿಸಿದ್ದರು. ಹಲವರು ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ ಮಾಡಿ, ಒಡವೆ ಹಾಗೂ ಸೀರೆಯನ್ನು ತೊಡಿಸಿ ಅಲಂಕಾರ ಮಾಡಿದ್ದರು. ಹಲವರು ಮಾರುಕಟ್ಟೆಯಲ್ಲಿ ದೊರೆಯುವ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಅಲಂಕೃತ ಮೂರ್ತಿಯ ಮುಂದೆ ಬಗೆಬಗೆಯ ಹಣ್ಣು, ತಿಂಡಿ, ತಿನಿಸು, ಬಾಗಿನ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಗಿತ್ತು.
ಪೂಜೆಯ ಸಮಯದಲ್ಲಿ ಹೆಣ್ಣು ಮಕ್ಕಳು ದೇವಿಯ ಮೂರ್ತಿಯ ಜತೆಗೆ ಹಾಗೂ ಪೂಜಾ ಸಂಭ್ರಮವನ್ನು ತಮ್ಮ ಮೊಬೈಲ್ ೆನ್‌ಗಳಲ್ಲಿ ಚಿತ್ರಿಕರಿಸಿ ಪೋಟೋ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಸಾಕಷ್ಟು ಮನೆಗಳಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರಿಸಿ ನೆರೆಹೊರೆಯ ಪರಿಚಿತರನ್ನು ಪೂಜೆಗೆ ಆಹ್ವಾನಿಸಲಾಗಿತ್ತು. ಹಲವರು ಸಾಧಾರಣವಾಗಿ ತಮ್ಮ ಮನೆಯಲ್ಲಿ ಲಕ್ಷ್ಮಿ ಮೂರ್ತಿಗೆ ಪೂಜೆಸಲ್ಲಿಸಿದ್ದರು. ಹಲವು ಮನೆಗಳಲ್ಲಿ ಮಕ್ಕಳು ಹೊಸಬಟ್ಟೆಯನ್ನು ತೊಟ್ಟು ಪೂಜೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರೆ, ಹಿರಿಯರು ಹಬ್ಬದ ಊಟ ಸವಿದು ಸಂತಸಗೊಂಡರು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ:
ಶ್ರೀವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ, ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯ, ಶ್ರೀವೀರಭದ್ರೇಶ್ವರ ದೇವಾಲಯ, ಶ್ರೀಆಂಜನೇಯ ದೇವಾಲಯ ಹಾಗೂ ಇನ್ನಿತರೆ ದೇವಾಲಯಗಳಿಗೆ ಜನರು ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಚಂದಕವಾಡಿಯ ಶ್ರೀಲಕ್ಷ್ಮೀ ಅಮ್ಮನವರ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಗ್ರಾಮಾಂತರ ಪ್ರದೇಶದ ವಿವಿಧ ದೇವಾಲಯಗಳಿಗೆ ಸಾರ್ವಜನಿಕರು ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿತ್ತು.
ವ್ಯಾಪಾರ ಜೋರು:
ಶ್ರಾವಣ ಮಾಸದಲ್ಲಿ ನಡೆಯುವ ವರಮಹಾಲಕ್ಷ್ಮಿ ಹಬ್ಬದ ದಿನವೂ ವ್ಯಪಾರ ವಹಿವಾಟು ತುಂಬಾ ಜೋರಾಗಿಯೇ ಜರುಗಿತು. ನಗರದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಮಾರಿಗುಡಿ ಮುಂಭಾಗದ ರಸ್ತೆ, ಹಳೆ ಮಾರುಕಟ್ಟೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಸಾರ್ವಜನಿಕರು ಹೂ, ಹಣ್ಣು, ಬಾಳೆಕಂದುಗಳನ್ನು ಖರೀದಿಸಿದರು. ಪೂಜಾ ಸಾಮಗ್ರ ಹಾಗೂ ಲಕ್ಷ್ಮೀ ಕೂರಿಸಲು ಅಗತ್ಯವಾದ ವಸ್ತುಗಳ ವಹಿವಾಟು ಜೋರಾಗಿ ನಡೆಯಿತು. ಮಧ್ಯಾಹ್ನದ ವೇಳೆಗಾಗಲೇ ವ್ಯಾಪಾರ ಕಡಿಮೆಯಾಯಿತು. ಪ್ರಮುಖ ರಸ್ತೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.