ಜಿಲ್ಲಾದ್ಯಂತ ರಾಮಧೂತನ ಸ್ಮರಣೆ

Hanuma Jayanthi
Published on

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಬಹುತೇಕ ಆಂಜನೇಯ ಸ್ವಾಮಿ ಸನ್ನಿಧಾನಗಳಲ್ಲಿ ಶನಿವಾರ ಹನುಮ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಹನುಮ ಜಯಂತಿ ಅಂಗವಾಗಿ ನಗರ, ಪಟ್ಟಣ ಸೇರಿ ಗ್ರಾಮೀಣ ಭಾಗದ ವಿವಿಧೆಡೆಯ ಶ್ರೀರಾಮ, ಆಂಜನೇಯ ಸ್ವಾಮಿ ದೇಗುಲ ಹಾಗೂ ಆವರಣಗಳನ್ನು ತಳಿರು, ತೋರಣಗಳಿಂದ ಸಿಂಗರಿಸಿ, ಗರ್ಭಗುಡಿಯಲ್ಲಿನ ಮೂರ್ತಿಗಳಿಗೆ ಮುಂಜಾನೆ ಅಭಿಷೇಕ, ಪುಷ್ಪಾರ್ಚನೆ ಸೇವೆ ಜರುಗಿತು.

ಬುರುಜನಹಟ್ಟಿಯ ಕೋಟೆ ಆಂಜನೇಯ, ನೆಹರು ನಗರದ ವೀರಾಂಜನೇಯ, ಸಿಹಿನೀರು ಹೊಂಡದ ಆಂಜನೇಯ, ಬೆನಕನ ಬಳಗದಿಂದ ಪಿಎನ್‌ಟಿ ಕ್ವಾರ್ಟ್ರಸ್‌ನ ಪಂಚಮುಖಿ ಆಂಜನೇಯ, ಕಣಿವೆ ಆಂಜನೇಯ ಸ್ವಾಮಿ ದೇಗುಲದಲ್ಲೂ ವಿಶೇಷ ಪೂಜೆ ನೆರವೇರಿದವು.

ಬೆಟ್ಟದ ಆಂಜನೇಯ, ತಮಟಕಲ್ಲು ಆಂಜನೇಯ, ಮದಕರಿ ಗಣಪತಿ ದೇಗುಲ, ಆನೆಬಾಗಿಲು ಬಳಿಯ ಆಂಜನೇಯ, ಮದಕರಿನಾಯಕ ವೃತ್ತ ಸಮೀಪದ ರಕ್ಷಾಂಜನೇಯ, ಜಿಲ್ಲಾ ಕ್ರೀಡಾಂಗಣ ರಸ್ತೆಯ ವೀರಾಂಜನೇಯ, ಬರಗೇರಿ ಆಂಜನೇಯ ಸ್ವಾಮಿ ಸೇರಿ ಹಲವು ದೇಗುಲಗಳಲ್ಲಿ ಮುಂಜಾನೆಯಿಂದ ರಾತ್ರಿ 9ರವರೆಗೂ ಭಕ್ತರು ಭೇಟಿ ನೀಡಿ ದರ್ಶನ ಪಡೆದು ಹಣ್ಣು-ಕಾಯಿ ಸಮರ್ಪಿಸಿದರು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು. ಕೆಲವೆಡೆ ಅನ್ನಸಂತರ್ಪಣೆ ನಡೆಯಿತು.

ಆಂಜನೇಯ ಸ್ವಾಮಿ ಮೂರ್ತಿಗಳಿಗೆ ವಿಳ್ಯದೆಲೆ, ಬೆಣ್ಣೆ, ವಿವಿಧ ಬಗೆಯ ಪುಷ್ಪ ಹಾಗೂ ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅರ್ಚಕರು ಅಲಂಕರಿಸಿದ್ದರು. ಹೊರಭಾಗದಲ್ಲಿ ವಿದ್ಯುತ್ ದೀಪಾಲಂಕಾರ ಝಗಮಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net