ಜಿಲ್ಲಾದ್ಯಂತ ಯುಗಾದಿ ಹಬ್ಬದ ಸಂಭ್ರಮ

Yugadi
Published on

ಚಿತ್ರದುರ್ಗ: ಹಿಂದುಗಳ ನೂತನ ವರ್ಷಾರಂಭದ ಪವಿತ್ರ ಹಬ್ಬ ಯುಗಾದಿ ಸಂಭ್ರಮ ಹಲವೆಡೆ ಮನೆಮಾಡಿತ್ತು. ಹೊಸ ಜೀವನೋತ್ಸಾಹದೊಂದಿಗೆ ಕೋಟೆನಗರಿ ಸೇರಿ ಜಿಲ್ಲೆಯ ಜನ ಸೋಮವಾರ ಚಂದ್ರನನ್ನು ಕಣ್ತುಂಬಿಕೊಂಡರು. ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ಹಬ್ಬಗಳು ಎಲ್ಲರಲ್ಲೂ ಸಂಭ್ರಮ ತರುವುದು ಸಹಜ. ಅದರ ಜೊತೆಗೆ ಶುಭ ಉಂಟು ಮಾಡುತ್ತದೆಂಬ ನಂಬಿಕೆ ಈಗಲೂ ಅನೇಕರಲ್ಲಿದ್ದು, ಅದರಂತೆ ಕ್ರೋಧಿ ವಿಶ್ವಾವಸುನಾಮ ಸಂವತ್ಸರದ ಈ ಬಾರಿಯ ಯುಗಾದಿಯನ್ನು ಅಭ್ಯಂಜನ ಸ್ನಾನ, ಬೇವು-ಬೆಲ್ಲ ಸವಿಯುವುದರೊಂದಿಗೆ ಸ್ವಾಗತಿಸಿ, ಆಚರಿಸಲು ಮುಂದಾದರು.

ಯುಗಾದಿಯಲ್ಲಿ ಚಂದ್ರದರ್ಶನ ಪ್ರಮುಖ ಭಾಗವಾಗಿದ್ದು, ಭಾನುವಾರ ಕಾಣದವರು ಸೋಮವಾರ ಸಂಜೆ ಮೋಡದ ಮರೆಯಲ್ಲಿ ಕಣ್ಣಾ-ಮುಚ್ಚಾಲೆ ಆಟದಂತೆ, ಗೆರೆಯಂತೆ ಗೋಚರಿಸಿದ ಚಂದ್ರನ ದರ್ಶನ ಪಡೆಯಲು ಹಲವರು ಉತ್ಸುಕರಾದರು. ಅನೇಕರು ಹರಸಾಹಸ ಪಟ್ಟು ಕೊನೆಗೂ ನೋಡಿ ಪುನೀತರಾದರು. ಕಾಣದವರು ದೇಗುಲಕ್ಕೆ ತೆರಳಿ ಮಹಾದೇವನ ಮೂರ್ತಿಯ ತಲೆಯ ಮೇಲಿರುವ ಚಂದ್ರನ ದರ್ಶನ ಪಡೆದರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಲ್ಲಿದ್ದ ಹಲವು ದೇಗುಲಗಳನ್ನು ಭಾನುವಾರವೇ ಕಣ್ಮನ ಸೆಳೆಯುವಂತೆ ವಿವಿಧ ಬಗೆಯ ಪುಷ್ಪ, ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿಗಳು ಕೂಡ ಕಂಗೊಳಿಸಿದವು.

ನಗರದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ಸ್ವಾಮಿ ಸನ್ನಿಧಾನ ಬೆಳಗ್ಗೆ 5ರಿಂದ ರಾತ್ರಿ 12ರವರೆಗೂ ತೆರೆದಿತ್ತು. ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಮೇಲುದುರ್ಗದ ಹಿಂಡಬೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ಗೌರಸಂದ್ರ ಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಕಾಳಿ ಕಮಠೇಶ್ವರಿ, ಚೌಡೇಶ್ವರಿ, ಬನ್ನಿ ಮಹಾಕಾಳಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಒಳಗೊಂಡು ಹಲವು ದೇಗುಲಗಳಲ್ಲಿ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ ಸೇರಿ ವಿಶೇಷ ಪೂಜೆ ನೆರವೇರಿದವು. ಭೇಟಿ ನೀಡಿದ ಭಕ್ತರು ಆರೋಗ್ಯ, ಸಮೃದ್ಧಿ ಸೇರಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.

ಈ ಹಬ್ಬದಲ್ಲಿ ಚಂದ್ರ ದರ್ಶನಕ್ಕೂ ಮುನ್ನ ಸಿಹಿ ತಿನಿಸನ್ನು ಸ್ವೀಕರಿಸಬೇಕು. ಹೀಗಾಗಿ ಬಹುತೇಕರ ಮನೆಗಳಲ್ಲಿ ಹೋಳಿಗೆ ತಯಾರಿಸಲಾಗಿತ್ತು. ಅದರ ಜತೆಗೆ ತರಹೇವಾರಿ ಖಾದ್ಯಗಳನ್ನು ಕುಟುಂಬ ಸಮೇತರಾಗಿ ಆಸ್ವಾದಿಸಿದರು.

ಚಂದ್ರ ಮತ್ತು ದೇವರ ದರ್ಶನದ ನಂತರ ಗುರು-ಹಿರಿಯರ ಮನೆಗಳಿಗೆ ತೆರಳಿ ಅವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಸ್ನೇಹಿತರಿಗೆ, ಹಿತೈಷಿಗಳಿಗೆ, ಸಂಬಂಧಿಕರಿಗೆ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಟ್ಟಾರೆ ಯುಗಾದಿ ಹಬ್ಬವನ್ನು ಅತ್ಯುತ್ಸಾಹ, ಲವಲವಿಕೆಯಿಂದ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net