

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮ ದಿನವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಬಿಜೆಪಿ ವತಿಯಿಂದ ರಕ್ತದಾನ ಶಿಬಿರ, ಶ್ರಮದಾನ, ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಗರ ಯುವ ಮೋರ್ಚಾ ಕಾರ್ಯಕರ್ತರು ಹೇಮಾವತಿ ಪ್ರತಿಮೆ ಸಮೀಪ ಪ್ರಧಾನಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಡವರಿಗೆ ಹಣ್ಣು ಹಂಪಲು ವಿತರಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಮಾತನಾಡಿ, ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆ.19ರಂದು ಹೇಮಾವತಿ ಪ್ರತಿಮೆ ಬಳಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ನಗರ ಯುವ ಮೋರ್ಚಾ ಅಧ್ಯಕ್ಷ ರೂಪೇಶ್, ಮುರುಳಿಧರ್, ಅವಿನಾಶ್, ಲಿಖಿತ್, ದರ್ಶನ್, ರಮೇಶ್, ನಿಖಿಲ್, ದೀಪಕ್, ರಘು, ಅಶೋಕ್, ಮೋಹನ್, ಮಹೇಶ್ ಹಾಗೂ ಇತರರಿದ್ದರು.