

ಬಳ್ಳಾರಿ : ನಗರವೂ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ತಡರಾತ್ರಿ ಒಂದು ಗಂಟೆಗೂ ಅಧಿಕ ಸಮಯ ಗುಡುಗು , ಮಿಂಚು, ಗಾಳಿ ಸಹಿತ ಭಾರಿ ಮಳೆಯಿತು. ಜಿಲ್ಲೆಯ ಸರ್ಕಾರಿ ಕಚೇರಿ ಆವರಣ, ಶಾಲಾ ಕಾಲೇಜು ಮೈದಾನಗಳು ಜಲಾವೃತಗೊಂಡವು. ಜಿಲ್ಲೆ ಸೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಬೃಹತ್ ಮರಗಳು ಧರೆ ಉರುಳಿದರೆ, ಹಲವು ಮರಗಳು ಕೊಂಬೆಗಳು ಮುರಿದು ಬಿದ್ದಿವೆ.
ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆ ಹಾಗೂ ಎಸ್‌ಎನ್ ಪೇಟೆಯ ಸೇರಿದಂತೆ ಕೆಲ ಭಾಗಗಳಲ್ಲಿರುವ ರೈಲ್ವೆ ಕೆಳಸೇತುವೆಗಳು ಜಲಾವೃತಗೊಂಡ ಪರಿಣಾಮ ಕೆಳ ಸೇತುವೆಯಲ್ಲಿ ವಾಹನ ಸವಾರರು ಸಂಚರಿಸಲು ಪರದಾಡಿದರು. ಕೆಲ ಆಟೋ, ಕಾರು ವಾಹನಗಳು ಸೇತುವೆ ಕೆಳಗಡೆ ಕೆಟ್ಟು ನಿಂತವು. ಕೆಲವರು ಸೇತುವೆ ಕೆಳಗಡೆ ನೀರು ನಿಂತಿದ್ದರಿಂದ ಪರ್ಯಾಯ ರಸ್ತೆಯ ಮೂಲಕ ಸಂಚರಿಸಿದರು. ಅನೇಕ ಕಡೆಗಳಲ್ಲಿ ರಸ್ತೆಯಲ್ಲಿಯೇ ನೀರು ಹರಿದ ಕಾರಣ ವಾಹನಗಳು ಮುಂದಕ್ಕೆ ಚಲಿಸಲು ಪರದಾಡುವಂತಾಯಿತು. ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ನೀರು ನಿಂತು ವ್ಯಾಪಾರ ಮತ್ತು ವಾಹನ ಸಂಚಾರಕ್ಕೂ ತೊಂದರೆ ಉಂಟಾಯಿತು. ನಗರದ ಸಬ್ ರಿಜಿಸ್ಟ್ ರ್ ಕಚೇರಿಯ ಆವರಣದಲ್ಲಿನ ಬೃಹತ್ ಮರ ಗಾಳಿ ಸಹಿತ ಮಳೆಗೆ ಬೇರು ಸಮೇತ ನೆಲಕ್ಕೆ ಬಿದ್ದಿದ್ದರಿಂದ ಕಚೇರಿಗೆ ಬರುವವರೆಗೆ ಸಮಸ್ಯೆಯಾಯಿತು. ನಗರ ಹಾಗೂ ತಾಲೂಕಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಆವರಣದಲ್ಲಿ ಮಳೆ ನೀರು ನಿಂತಿದ್ದವು. ಸಿಬ್ಬಂದಿ ಮೋಟಾರ್‌ಗಳ ಮೂಲಕ ನೀರು ಹೊರ ಹಾಕುತ್ತಿರುವುದು ಕಂಡು ಬಂತು. ತಾಲೂಕಿನ ಮೋಕಾ ಗ್ರಾಮದ ಶಾಲಾ ಕಾಲೇಜು ಮೈದಾನದಲ್ಲಿ ಮಳೆ ನೀರು ನಿಂತು ಕೆರೆಯಂತೆ ಜಲಾವೃತಗೊಂಡಿತ್ತು. ಕೆಲ ಮಕ್ಕಳು ಮೈದಾನದಲ್ಲಿ ನಿಂತ ನೀರಿನಲ್ಲಿಯೇ ಆಟವಾಡಿದರು. ಸಂಡೂರು ತಾಲೂಕಿನ ವಿಠಲಾಪುರ ಗ್ರಾಪಂ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದ ಹಳ್ಳದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋದ ಪರಿಣಾಮ ಕೆಎಸ್‌ಆರ್‌ಟಿ ಬಸ್ ರಸ್ತೆಯಲ್ಲಿಯೇ ನಿಂತಿತು. ಇದಲ್ಲದೇ ತಾಲೂಕಿನ ಗುಡುದೂರು, ಚಾನಾಳ್ ಗ್ರಾಮದ ಹಳ್ಳದ ಸೇತುವೆ ಮೇಲೆ ನೀರು ಹರಿದವು. ಜಿಲ್ಲಾದ್ಯಂತ ತಡರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಬಿರುಸಿನ ಗಾಳಿಗೆ ವಿವಿಧ ಕಡೆ ವಿದ್ಯುತ್ ಸರಬಾರಜು ತಂತಿಗಳು ಮರಗಳ ಮೇಲೆ ಬಿದ್ದಿದ್ದರಿಂದ ಬೆಳಗ್ಗೆಯ ಜೆಸ್ಕಾಂ ಸಿಬ್ಬಂದಿ ತೆರವುಗೆ ಮುಂದಾದರು. ಕೆಲ ವಿದ್ಯುತ್ ಸರಬಾರಜು ತಂತಿಗಳು ಸಂಪರ್ಕ ಕಡಿತವಾಗಿದ್ದರಿಂದ ಸಾಯಂಕಾಲ ನಾಲ್ಕು ಗಂಟೆಯಾದರೂ ಕರೆಂಟ್ ಬಂದಿರಲಿಲ್ಲ. ಜಿಲ್ಲೆಯ ಗಡಿಭಾಗದ ವೇದಾವತಿ ನದಿ ಈ ವರ್ಷದ ಮೊದಲ ಬಾರಿಗೆ ತುಂಬಿ ಹರಿಯಿತು. ವೇದಾವತಿ ನದಿ ತುಂಬಿದ್ದು ಕಂಡ ನದಿ ಹೊಂದಿಕೊಂಡ ಪ್ರದೇಶದ ರೈತರು ಸಂತಸ ವ್ಯಕ್ತಪಡಿಸಿದರು. ಭಾರಿ ಗುಡುಗು ಸಹಿತ ಮಳೆಯಿಂದ ಬಳ್ಳಾರಿ ಹಾಗೂ ಸಂಡೂರು ಸೇರಿ 17 ಮನೆಗಳು ಬಿದ್ದಿವೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದರು.