ಜಿಲ್ಲಾದ್ಯಂತ ಬಸ್ ಸಂಚಾರ ಆರಂಭ

19-gdg-3c
Published on

ಗದಗ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್​ಡೌನ್ ಸಡಿಲಗೊಳಿಸಿದ್ದರಿಂದ ಜಿಲ್ಲೆಯ ಏಳು ಡಿಪೋಗಳಲ್ಲಿ ಮಂಗಳವಾರ ಬಸ್ ಸಂಚಾರ ಆರಂಭವಾಯಿತು. ಚಾಲಕರು, ನಿರ್ವಾಹಕರು ಬಸ್​ಗಳಿಗೆ ಪೂಜೆ ಸಲ್ಲಿಸಿ ಸಂಚಾರಕ್ಕೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ 228 ಶೆಡ್ಯೂಲ್​ಗಳಿದ್ದು (ರೂಟ್), ಇದರಲ್ಲಿ ಮಂಗಳವಾರ 50 ಶೆಡ್ಯೂಲ್​ಗಳಲ್ಲಿ ಬಸ್ ಸಂಚರಿಸಿದವು. ಬೆಳಗ್ಗೆ 7ರಿಂದ ರಾತ್ರಿ 7 ಗಂಟೆವರೆಗೆ ಮಾತ್ರ ಬಸ್ ಸಂಚಾರ ಕಂಡುಬಂದಿತು.

ಜಿಲ್ಲೆಯಿಂದ ಹೊರ ಹೋಗುವ ಮತ್ತು ಬರುವ ಎಲ್ಲ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಪ್ರಯಾಣಿಕರ ವಿಳಾಸ ಮತ್ತು ಮೊಬೈಲ್ ನಂಬರ್ ನೋಂದಣಿ ಮಾಡಿಕೊಳ್ಳಲಾಯಿತು. ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಬಸ್ ಸಂಚಾರ ಅರಂಭವಾಯಿತಾದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಪ್ರತಿ ಬಸ್​ನಲ್ಲಿ 28 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದರೂ 10-12 ಜನರು ಮಾತ್ರ ಪ್ರಯಾಣಿಸಿದರು. ಅಂತರ್ ಜಿಲ್ಲೆಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಗದಗ-ಬೆಟಗೇರಿ ಅವಳಿನಗರದಲ್ಲಿ ನಗರ ಸಾರಿಗೆ ಬಸ್ ಸಂಚಾರ ಇರಲಿಲ್ಲ. ‘ಬುಧವಾರದಿಂದ ಸೇವೆ ಆರಂಭಿಸಲಾಗುವುದು. ಅವಳಿನಗರದಲ್ಲಿ ಟಂಟಂಗಳು ಸಂಚಾರ ಹೆಚ್ಚಿರುವುದರಿಂದ ನಗರ ಸಾರಿಗೆ ಸಂಚಾರವನ್ನು ಜನರು ಬಯಸುವುದಿಲ್ಲ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದರು.

ಬೆಂಗಳೂರು ಬಸ್ ಭರ್ತಿ: ಮಂಗಳವಾರ 28 ಪ್ರಯಾಣಿಕರ ಬಸ್ ಬೆಂಗಳೂರಿಗೆ ತೆರಳಿತು. ಇನ್ನೂ ಹತ್ತರಿಂದ ಹದಿನೈದು ಜನರು ಬೆಂಗಳೂರಿಗೆ ತೆರಳುವವರಿದ್ದರು. ಆದರೆ, ಮತ್ತೊಂದು ಬಸ್ ಬಿಡಲು ಕನಿಷ್ಠ 28 ಜನ ಬೇಕಿದ್ದರಿಂದ ಒಂದೇ ಬಸ್ ಬಿಡಲಾಯಿತು. ಬುಧವಾರ ಬೆಂಗಳೂರಿಗೆ ಮೂರು ಬಸ್ ಬಿಡುವುದಾಗಿ ಅಧಿಕಾರಿಗಳು ತಿಳಿಸಿದರು. ಉಳಿದಂತೆ ಕೊಪ್ಪಳ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ರಾಯಚೂರು, ಬಳ್ಳಾರಿಗೆ ಬಸ್​ಗಳು ಸಂಚರಿಸಿದವು. ಪ್ರತಿ ಬಸ್​ನಲ್ಲೂ 15-20 ಜನರು ಪ್ರಯಾಣಿಸಿದರು. ಜಿಲ್ಲೆಯ ಕೆಲ ಗ್ರಾಮಗಳಿಗೆ ತೆರಳುವ ಬಸ್ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು. ರಾತ್ರಿ 7ರ ನಂತರ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಯಾವುದೇ ಬಸ್​ಗಳು ರಾತ್ರಿ ವಸತಿ ಇರುವುದಿಲ್ಲ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಹಕಾರ ನೀಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡುತ್ತಿದ್ದರು.

ಪೂಜೆ ಸಲ್ಲಿಸಿ ಬಸ್ ಏರಿದರು: ಚಾಲಕ-ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಮೊದಲೇ ಸೂಚನೆ ನೀಡಿದ್ದರಿಂದ ಯಾವುದೇ ತೊಂದರೆ ಉಂಟಾಗಲಿಲ್ಲ. ಚಾಲಕರು ಬಸ್​ಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ, ಪೂಜೆ ಸಲ್ಲಿಸಿ ಬಸ್ ಏರಿದರು. ಮಾಸ್ಕ್ ಧರಿಸಿದವರಿಗೆ ಮಾತ್ರ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು.

ಮಂಗಳವಾರದಿಂದ ಬಸ್ ಸಂಚಾರ ಆರಂಭಿಸಲಾಗಿದ್ದು, ಮೊದಲ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. 50 ಶೆಡ್ಯೂಲ್​ಗಳಲ್ಲಿ ಬಸ್​ಗಳು ಸಂಚರಿಸಿದವು. ಹಂತಹಂತವಾಗಿ ಶೆಡ್ಯೂಲ್​ಗಳನ್ನು ಹೆಚ್ಚಿಸಲಾಗುವುದು. ಪ್ರತಿ ಪ್ರಯಾಣಿಕರ ಮಾಹಿತಿ ನೋಂದಣಿ ಮಾಡಿಕೊಳ್ಳಲಾಗಿದೆ. ಪ್ರತಿ ಪ್ರಯಾಣಿಕರು ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಂಡು ಪ್ರಯಾಣಿಸಬೇಕೆಂದು ಸೂಚನೆ ನೀಡಲಾಗಿದೆ.| ಎಫ್.ಸಿ. ಹಿರೇಮಠ, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net