

ಚಿಕ್ಕಬಳ್ಳಾಪುರ : ಜಿಲ್ಲಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನರಕ ಚತುರ್ಥಿ ಆಚರಣೆಯ ದಿನ ಶನಿವಾರದಿಂದಲೇ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ತಳಿರು ತೋರಣ ಕಟ್ಟಿ, ಹೂವುಗಳಿಂದ ಅಲಂಕರಿಸಲಾಗಿತ್ತು.
ಶನಿವಾರದಿಂದ ಭಾನುವಾರ ಬೆಳಗ್ಗೆ 11 ರವರೆಗೂ ಹಬ್ಬದ ಆಚರಣೆ ಒಳ್ಳೆಯದು. ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಬೇಕೆಂಬ ಸ್ಥಳೀಯ ಅರ್ಚಕರ ಸಲಹೆ ಹಿನ್ನೆಲೆಯಲ್ಲಿ ಭಕ್ತರು ದೇವಾಲಯಕ್ಕೆ ಮುಗಿ ಬಿದ್ದಿದ್ದರು. ಕೇದಾರೇಶ್ವರ ಸೇರಿ ವಿವಿಧ ವ್ರತಾಚರಣೆ ಪದ್ಧತಿ ಇರುವವರು ಮನೆಯಲ್ಲೇ ಕಳಶವನ್ನಿರಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಕಳಸ ಇರಿಸಿದ್ದ ಮಂಟಪವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಪೂಜಾ ಕೈಂಕರ್ಯ ಬಳಿಕ ಸಂಜೆ ದೇವರಿಗೆ ಆರತಿ ಬೆಳಗಿ ಸುಮಂಗಲಿಯರಿಗೆ ಅರಿಶಿಣ ಕುಂಕುಮ ಬಾಗಿನ ನೀಡಿದರು.
ವ್ರತಾಚರಣೆ ಪದ್ಧತಿ ಇಲ್ಲದವರು ನಗರದ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಗಂಗಮ್ಮನ ಗುಡಿ ರಸ್ತೆಯ ಶ್ರೀ ಜಾಲಾರಿ ಗಂಗಾಮಾಂಬಾ ದೇವಾಲಯದಲ್ಲಿ ಕಳಶ ಪ್ರತಿಷ್ಠಾಪಿಸಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಾಗಿನದೊಂದಿಗೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿದರು. ಇನ್ನೂ ದೇವರ ನೋಮುದಾರಗಳನ್ನು ಕಟ್ಟಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಸಿಹಿ ಜತೆಗೆ ಪಟಾಕಿ ಸಂಭ್ರಮ : ಬುಧವಾರ ಬೆಳಗ್ಗೆ ಕಜ್ಜಾಯ ನೈವೈದ್ಯಕ್ಕಿರಿಸಿ ಪೂಜೆ ಸಲ್ಲಿಸಿದ ಬಳಿಕ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸಿ ಮನೆ ಮಂದಿಯೆಲ್ಲಾ ಸವಿದರು. ಪಟಾಕಿಯ ಆರ್ಭಟ ಈ ಬಾರಿ ಇರಲಿಲ್ಲ. ಸಂಜೆ ಅಲ್ಲಲ್ಲಿ ಪಟಾಕಿ ಬಿರುಸು ಬಾಣಗಳ ಸದ್ದು ಕೇಳಿ ಬಂತು.