ಜಿಲ್ಲಾದ್ಯಂತ ತೀವ್ರಗೊಂಡ ಹೋರಾಟ

ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ರೈತರು ಕೆ.ಆರ್. ಸಾಗರದಲ್ಲಿ ಬುಧವಾರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
1693403080803
Published on

ಕೆ.ಆರ್.ಸಾಗರ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.


ಕೆ.ಆರ್.ಸಾಗರ-ಕನ್ನಂಬಾಡಿ ಅಣೆಕಟ್ಟೆ ಜಂಕ್ಷನ್ ಬಳಿ ರೈತ ಸಂಘದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾವೇರಿ ನಿರ್ವಹಣಾ ಮಂಡಳಿ ಸಂಕಷ್ಟ ಸೂತ್ರ ಅನುಸರಿಸುತ್ತಿಲ್ಲ. ಸಾಕಷ್ಟು ಮಳೆಯಾಗಿ ಅಣೆಕಟ್ಟೆ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.


ಈಗಾಗಲೇ ಬೆಳೆದು ನಿಂತಿರುವ ಬೆಳೆಗಳಿಗೆ ಕಟ್ಟು ನೀರು ಪದ್ಧತಿ ಅನುಸರಿಸಲಾಗುತ್ತಿದೆ. ಇನ್ನು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದಂತಾಗುತ್ತದೆ. ರಾಜ್ಯ ಸರ್ಕಾರ ಮೊದಲು ರಾಜ್ಯದ ಹಿತ ಕಾಪಾಡಬೇಕು. ತಮಿಳುನಾಡು ಸರ್ಕಾರ ಹಾಗೂ ಪ್ರಾಧಿಕಾರದ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿವರೆಗೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಕಾವೇರಿ ನಿರ್ವಹಣಾ ಸಮಿತಿ ಆದೇಶ ಅವೈಜ್ಞಾನಿಕವಾಗಿದೆ. ನಮ್ಮ ಅಣೆಕಟ್ಟಿಯಲ್ಲಿ ನೀರಿನ ಮಟ್ಟ 100ರ ಗಡಿ ತಲುಪಿದ ಸಂದರ್ಭದಲ್ಲಿ ನಮಗೆ ಕುಡಿಯುವ ನೀರಿಗೂ ಅಭಾವ ಸ್ಥಿತಿ ಉಂಟಾಗಲಿದೆ. ನಮ್ಮ ರೈತರ ಬೆಳೆಗಳಿಗೂ ನೀರಿಲ್ಲ. ನೀರಿನ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದರೂ ಕಾವೇರಿ ನದಿ, ನೀರು ವಿಚಾರದಲ್ಲಿ ನಾನು ರೈತರ ಪರ, ನೀರು ಬಿಟ್ಟ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸುತ್ತೇನೆ. ನೀರು ಬಿಡುವುದನ್ನು ನಿಲ್ಲಿಸುವ ತನಕ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಎಂದರು.


ಕಾವೇರಿ ನೀರು ಕೇವಲ ಮಂಡ್ಯ ಜನರ ಸ್ವತ್ತಲ್ಲ. ಮೈಸೂರು ಮತ್ತು ಕಾವೇರಿ ನೀರನ್ನು ಉಪಯೋಗಿಸುವ ಪ್ರತಿಯೊಬ್ಬ ನಾಗರೀಕರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.


ಧರಣಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ, ಪ್ರಸನ್ನ ಎನ್.ಗೌಡ, ನಾಗರಾಜು, ವಿಜಯಕುಮಾರ್, ಕೃಷ್ಣೇಗೌಡ ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ವಿವಿಧೆಡೆಗಳಿಂದ ನೂರಾರು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net