ಜಿಲ್ಲಾದ್ಯಂತ ಕಳೆಕಟ್ಟಿದ ಸಂಕ್ರಾಂತಿ ಸಡಗರ

kk
Published on

ರಾಮನಗರ : ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಸುಗ್ಗಿ ಹಬ್ಬದ ಎಲ್ಲೆಡೆ ಸಂಭ್ರಮವನ್ನು ಸೃಷ್ಠಿ ಮಾಡಿತ್ತು. ಈ ಬಾರಿ ಭರ್ಜರಿಯಾಗಿಯೆ ಆಚರಣೆ ಮಾಡಲು ಜನತೆ ಸಿದ್ಧತೆ ಮಾಡಿಕೊಂಡಿದ್ದರು. ಹೆಣ್ಣು ಮಕ್ಕಳು ಸಂಕ್ರಾಂತಿ ಎಳ್ಳು ಬೀರುವ ಮೂಲಕ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು. ಸಂಜೆ ವೇಳೆ ಸಿಂಗಾರಗೊಂಡಿದ್ದ ಮಕ್ಕಳು, ಅಕ್ಕ ಪಕ್ಕದ ಮನೆಗೆ ತೆರಳಿ ಎಳ್ಳು ಕೊಡು ಕೊಳ್ಳುವಿಕೆಯನ್ನು ಮಾಡುತ್ತಿದ್ದ ದಶ್ಯ ಕಂಡು ಬಂದಿತು. ದೇವಾಲಯಗಳಲ್ಲಿ ವಿಶೇಷ ಪೂಜೆಗಳೂ ನಡೆದವು.

ಸಿಂಗಾರಗೊಂಡ ರಾಸು: ಸಂಕ್ರಾಂತಿ ಸುಗ್ಗಿ ಹಬ್ಬವಾಗಿರುವ ಕಾರಣ, ರೈತರ ಮನೆಗಳಿಗೆ ಫಲಸು ಬರಲು ಪ್ರಮುಖ ಕಾರಣವಾಗುವ ರಾಸುಗಳನ್ನು ಸಿಗಂರಿಸಿ ಅವುಗಳನ್ನು ಕಿಚ್ಚಾಯಿಸುವುದು ಹಿಂದಿನಿಂದಲೂ ವಾಡಿಕೆ. ಮಂಗಳವಾರ ರಾಸುಗಳ ಮೈ ತೊಳಿದು, ಸಂಜೆಯ ವೇಳೆಗೆ ಊರಿನ ಪೂರ್ತಿ ಮೆರವಣಿಗೆ ಮಾಡಿ, ಧನ ಹಾಗೂ ಹೋರಿಗಳನ್ನು ಕಿಚ್ಚು ಆಯಿಸಲಾಯಿತು.

ಎಳ್ಳು ಬೀರಿದರು: ಮನೆಯಲ್ಲಿನ ಹೆಣ್ಣು ಮಕ್ಕಳು ಅಕ್ಕ ಪಕ್ಕದ ಮನೆಗೆ ತೆರಳಿ, ಎಳ್ಳು ಬೀರುವ ದಶ್ಯ ಸಾಮಾನ್ಯವಾಗಿತ್ತು. ಸಿಂಗಾರ ಗೊಂಡಿದ್ದ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ್ದ ಎಳ್ಳು ಮತ್ತುಕಬ್ಬು ಮನೆ ಮನೆಗೆ ತೆರಳಿ, ವಿನಿಮಯ ಮಾಡಿಕೊಂಡ ದಶ್ಯ ಸಾಮಾನ್ಯವಾಗಿತ್ತು. ಜಿಲ್ಲೆಯ ಕೆಲವು ಭಾಗದಲ್ಲಿ ರಾಸುಗಳಿಗೆ ಕಿಚ್ಚು ಆಯಿಸಿದ ನಂತರ ಹಳ್ಳಿಯ ಪೂರ್ತಿ ತಮಟೆ ವಾದ್ಯಗಳೊಂದಿಗೆ ಊರು ಪೂರ್ತಿ ರಾಸುಗಳನ್ನು ಮೆರವಣಿಗೆ ಮಾಡಲಾಗಿದೆ. ಈ ವೇಳೆ ಗ್ರಾಮದ ಜನತೆ ಭಾಗವಹಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡಿತ್ತು.

ಜಾನಪದ ಲೋಕದಲ್ಲಿ ಸಂಭ್ರಮ: ಜನಪದ ಕಲೆಯ ವಿಶ್ವವಿದ್ಯಾಲಯ ಜಾನಪದ ಲೋಕ ಸುಗ್ಗಿ ಹಬ್ಬದ ಸಂಭ್ರಮದಲ್ಲಿ ತೇಲಾಡಿತು.

ಸದಾ ವಿವಿಧ ಜನಪದ ಪೂರಕವಾದ ಕಾರ್ಯಕ್ರಮವನ್ನು ಆಯೋಜಿಸುವ ಜಾನಪದ ಲೋಕದಲ್ಲಿ ಪ್ರತಿ ವರ್ಷ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಂಕ್ರಾಂತಿ ಹಬ್ಬ ಸಡಗರದಿಂದ ನಡೆಯಿತು.

ಮಂಗಳವಾರ ಜಾನಪದಲ್ಲಿ ಲೋಕಸಿರ ಕಾರ್ಯಕ್ರಮದ ಜತೆಗೆ ವಿಶೇಷವಾಗಿ ಸುಗ್ಗಿ ಹಬ್ಬವನ್ನು ಆಚರಣೆ ಮಾಡಲಾಯಿತು. ಕೃಷಿ ಚಟುವಟಿಕೆಗೆ ಬಳಸುವ ನೇಗಿಲು, ಕೂರಿಗೆ ಸಹಿತ ಇತರೆ ವಸ್ತುಗಳಿಗೆ ಪೂಜೆ ನಡೆಸುವ ಜತೆಗೆ ಕಣವನ್ನು ಸಿದ್ಧಪಡಿಸಿ, ಇದರಲ್ಲಿ ರಾಗಿ ರಾಸಿಯನ್ನು ಹಾಕಿ ಪೂಜೆ ಮಾಡಲಾಯಿತು. ನಂತರ ಸಂಕ್ರಾಂತಮ್ಮನಿಗೆ ಪೂಜೆ ಸಲ್ಲಿಸಿ ಕಿಚ್ಚುಹಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಜಾನಪದ ಲೋಕದಲ್ಲಿ ನಡೆದ ರಾಸುಗಳ ಕಿಚ್ಚು ಹಾಯಿಸುವಿಕೆ ಕಾರ್ಯಕ್ರಮಕ್ಕೆ ಸಂಕ್ರಾಂತಮ್ಮನಿಗೆ ಪೂಜೆ ಮಾಡಿದ ನಂತರ ಪರಿಷತ್‌ನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ , ಪರಿಷತ್‌ನ ಟ್ರಸ್ಟಿ ಆದಿತ್ಯ ನಂಜರಾಜ್ ಅಗ್ನಿ ಸ್ಪರ್ಶ ಕಿಚ್ಚು ಹಾಯಿಸಿದರು.

ಬಂದಿದ್ದ ಪ್ರವಾಸಿಗರಿಗೆ ಇದೇ ವೇಳೆ ಬೇಯಿಸಿದ ಕಡಲೆಕಾಯಿ, ಅವರೇಕಾಯಿಯನ್ನು ವಿತರಣೆ ಮಾಡಲಾಯಿತು.

ವಾರ್ತಾ ಮತ್ತು ಪ್ರಚಾರ ಇಲಾಕೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಜಾನಪದ ಲೋಕದ ಆಡಳಿತಾಧಿಕಾರಿ ಸರಸವಾಣಿ, ಕ್ಯೂರೇಟರ್ ಡಾ.ಯು ಎಂ ರವಿ, ಪ್ರದೀಪ್, ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ.ಸ್ವಾಮಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net