

ಮೈಸೂರು: ಜಿಲ್ಲಾದ್ಯಂತ ಗುರುವಾರವೂ ಉತ್ತಮ ಮಳೆ ಆಗಿದೆ. ಒಳಹರಿವು ಸಹ ಹೆಚ್ಚಾಗಿರುವುದರಿಂದ ಜಿಲ್ಲೆಯ ಮೂರು ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ.
ಕಳೆದ ಮೂರ‌್ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ನಿರಂತರವಾಗಿ ಮಳೆಯಾಗುತ್ತಿದೆ. ಕೆಲವೊಮ್ಮೆ ಜಿಟಿಜಿಟಿ ಮಳೆ ಸುರಿದರೆ, ಕೆಲವೊಮ್ಮೆ ಧಾರಾಕಾರ ಮಳೆ ಆಗಿದೆ.
ಜೂನ್‌ನಿಂದ ಎದುರಾಗಿದ್ದ ಮಳೆ ಕೊರತೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ವರ್ಷಧಾರೆಯಿಂದ ನೀಗಿದಂತಾಗಿದೆ. ನೀರಿನ ಅಭಾವದಿಂದ ಒಣಗುವ ಸ್ಥಿತಿಯಲ್ಲಿದ್ದ ಕೃಷಿ ಬೆಳೆಗಳಿಗೂ ಜೀವಜಲ ದೊರೆತಂತಾಗಿದೆ. ಬೆಳೆನಷ್ಟ ಭೀತಿಯಲ್ಲಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಉತ್ತಮ ಮಳೆ ಆಗಿದೆ. ಬುಧವಾರ ಬೆಳಗ್ಗೆ 8.30ರಿಂದ ಗುರುವಾರ ಬೆಳಗ್ಗೆ 8ರ ವರೆಗೆ ಅಧಿಕ ಮಳೆ ಸುರಿದಿದೆ. 4.7 ಮಿಲಿ ಮೀಟರ್ ದಾಖಲಾಗಿದೆ. ಸಾಮಾನ್ಯವಾಗಿ 3.6 ಮಿಲಿ ಮೀಟರ್‌ನಷ್ಟು ಮಳೆ ಆಗುತ್ತಿತ್ತು. ಆದರೀಗ 1.1 ಮಿ.ಮೀಟರ್‌ನಷ್ಟು ಹೆಚ್ಚಿನ ಮಳೆ ಸುರಿದಿದೆ.
ವಿವಿಧೆಡೆ ಮಳೆ ಪ್ರಮಾಣ
ಜಿಲ್ಲೆಯಲ್ಲಿ ಪಿರಿಯಾಪಟ್ಟಣ, ಸರಗೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ಕಾಡಂಚಿನ ಎಚ್.ಡಿ.ತಾಲೂಕಿನಲ್ಲಿ 5.7 ಮಿ.ಮೀ, ಹುಣಸೂರು ತಾಲೂಕಿನಲ್ಲಿ 2.8 ಮಿ.ಮೀ, ಕೆ.ಆರ್.ನಗರ ತಾಲೂಕಿನಲ್ಲಿ 4.8 ಮಿ.ಮೀ, ಸಾಲಿಗ್ರಾಮ ತಾಲೂಕಿನಲ್ಲಿ 5.5. ಮಿ.ಮೀ, ಮೈಸೂರು ತಾಲೂಕಿನಲ್ಲಿ 2.6 ಮಿ.ಮೀ, ನಂಜನಗೂಡು ತಾಲೂಕಿನಲ್ಲಿ 4.9 ಮಿ.ಮೀ, ಪಿರಿಯಾಪಟ್ಟಣ ತಾಲೂಕಿನಲ್ಲಿ 7.3 ಮಿ.ಮೀ, ತಿ.ನರಸೀಪುರ ತಾಲೂಕಿನಲ್ಲಿ 2.5 ಮಿ.ಮೀ, ಸರಗೂರು ತಾಲೂಕಿನಲ್ಲಿ 7.1 ಮಿ.ಮೀ ಮಳೆ ಸುರಿದೆ. ಹುಣಸೂರು ತಾಲೂಕು ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಮಳೆ ಕೊರತೆ ನಿವಾರಣೆಯಾಗಿ ಅಧಿಕ ಮಳೆ ಆಗಿರುವುದು ವರದಿಯಾಗಿದೆ.
ಮನೆಗಳ ಕುಸಿತ
ಮಳೆಯಿಂದಾಗಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 9 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನಂಜನಗೂಡು ತಾಲೂಕಿನಲ್ಲಿ 1, ಕೆಆರ್ ನಗರ ತಾಲೂಕಿನಲ್ಲಿ 2, ಸರಗೂರು ತಾಲೂಕಿನಲ್ಲಿ 4, ಹುಣಸೂರು ತಾಲೂಕಿನಲ್ಲಿ 2 ಮನೆಗಳು ಕುಸಿದಿವೆ.
ಕಬಿನಿಯಿಂದ 21 ಕ್ಯೂಸೆಕ್ ನೀರು ಹೊರಕ್ಕೆ:
ಕೇರಳದ ವಯನಾಡು ಪ್ರದೇಶದಲ್ಲಿ ಅಧಿಕ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 30 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದರಿಂದಾಗಿ 22,451 ಕ್ಯೂಸೆಕ್ ನೀರು ಬರುತ್ತಿದೆ. 2,284 ಅಡಿ ಸಾಮರ್ಥ್ಯ ಇರುವ ಜಲಾಶಯ ಭರ್ತಿಗೆ ಎರಡು ಅಡಿಯಷ್ಟೇ ಬಾಕಿ ಉಳಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ 21 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ, ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಸ್ನಾನಘಟ್ಟದ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದೆ.
ನಗು ತುಂಬಲು 6 ಅಡಿ ಬಾಕಿ: ನಗು ಜಲಾಶಯಕ್ಕೂ 1968 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನೆಲಮಟ್ಟದಿಂದ 110 ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಚಿಕ್ಕ ಜಲಾಶಯ ಭರ್ತಿಗೆ 6 ಅಡಿ ಬಾಕಿ ಉಳಿದಿದೆ. ಸದ್ಯಕ್ಕೆ ನೀರನ್ನು ಹೊರಗೆ ಬಿಡುತ್ತಿಲ್ಲ. ಮತ್ತೊಂದು ಜಲಾಶಯವಾದ ತಾರಕಕ್ಕೆ 263 ಕ್ಯೂಸೆಕ್ ನೀರಿನ ಒಳಹರಿವು ಇದೆ. ಈ ಡ್ಯಾಂ ಗರಿಷ್ಠ ಮಟ್ಟ 2425 ಅಡಿ ಆಗಿದೆ. ಗುರುವಾರದ ಹೊತ್ತಿಗೆ 2413 ಅಡಿಯಷ್ಟು ನೀರು ಸಂಗ್ರಹವಾಗಿದೆ.
ಮೈಸೂರಿನಲ್ಲಿ ಮಲೆನಾಡಿನ ಅನುಭವ:
ಮೈಸೂರಿನಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದೆ. ಕಳೆದ 2-3 ದಿನ ಬಿಡುವಿಲ್ಲದೆ ಸುರಿದ ಮಳೆ ಕೊಂಚ ವಿಶ್ರಾಂತಿ ಪಡೆದುಕೊಂಡಿತ್ತು. ಆಗೊಮ್ಮೆ-ಈಗೊಮ್ಮೆ ಸುರಿದಿದೆ. ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ತಾಪಮಾನವೂ ಕಡಿಮೆಯಾಗಿದೆ. ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಮಳೆ-ತಂಗಾಳಿಯಿಂದ ಮಲೆನಾಡಿನ ಅನುಭವವಾಗುತ್ತಿದೆ.
ಸ್ವೇಟರ್, ಜರ್ಕಿನ್, ಕೈಗವಸುಗಳನ್ನು ಹಾಕಿಕೊಂಡು ಜನರು ಹೊರಬರುವುದು ಸಾಮಾನ್ಯವಾಗಿ ಕಂಡುಬಂತು. ಮಳೆಯಲ್ಲೇ ಮಕ್ಕಳು ಶಾಲೆ-ಕಾಲೇಜಿಗಳಿಗೆ ತೆರಳಿದರು. ಅಲ್ಲಿಂದ ಬರುವಾಗಲೂ ಮಳೆ ಸುರಿಯುತ್ತಲೇ ಇತ್ತು. ವಿದ್ಯಾರ್ಥಿಗಳು ಮನೆಗೆ ಸೇರಲು ಹೆಣಗಾಡಬೇಕಾಯಿತು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮಳೆಯಿಂದಾಗಿ ಪರದಾಡಿದರು.