ಜಿಲ್ಲಾದ್ಯಂತ ಆದಿಪೂಜಿತನ ಅದ್ದೂರಿ ಮೆರವಣಿಗೆ

Ganapa
Published on

ಚಿತ್ರದುರ್ಗ: ಗಣೇಶೋತ್ಸವ ಅಂಗವಾಗಿ ನಗರ ಸೇರಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ 399 ಗಣಪನ ಮೂರ್ತಿಗಳನ್ನು ಐದನೇ ದಿನವಾದ ಬುಧವಾರ ವೈಭವದೊಂದಿಗೆ ತಮ್ಮ ಏರಿಯಾಗಳಲ್ಲಿ ಬೀಳ್ಕೊಟ್ಟು, ರಾತ್ರಿ ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಬೃಹತ್ ಹೂವಿನ ಹಾರ ಸಮೇತ ವಿಘ್ನನಿವಾರಕ ವಿನಾಯಕನ ಮೂರ್ತಿಗಳನ್ನು ಟ್ರ್ಯಾಕ್ಟರ್, ಇನ್ನಿತರೆ ವಾಹನಗಳಲ್ಲಿ ಪ್ರತಿಷ್ಠಾಪಿಸಿ, ಹಿಂಭಾಗದ ಪ್ರಭಾವಳಿಯನ್ನು ವಿವಿಧ ವರ್ಣದ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು.

ಮುಂಜಾನೆ ಗಣಪನಿಗೆ ಸುಪ್ರಭಾತ ಸೇವೆ, ಅಷ್ಟೋತ್ತರ, ಪ್ರಾರ್ಥನೆ, ಅರ್ಚನೆ, ಮಹಾಮಂಗಳಾರತಿ ಸೇರಿ ಇತರೆ ಪೂಜಾ ಕಾರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ನಂತರ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

ಜೋಗಿಮಟ್ಟಿ ಗೆಳೆಯರ ಬಳಗದಿಂದ ಮೂರನೇ ತಿರುವಿನಲ್ಲಿ ಪ್ರತಿಷ್ಠಾಪಿಸಿದ್ದ ಜೆಎಂ ಗ್ರೂಪ್ಸ್ ಗಣಪ, ಸೇತುವೆ ಬಳಿಯ ನಾಲ್ಕನೇ ತಿರುವಿನಲ್ಲಿ ಪ್ರತಿಷ್ಠಾಪಿಸಿದ್ದ ವಿಷ್ಣು ಯೂತ್ಸ್ ಗ್ರೂಪ್ಸ್‌ನ ಗಣಪ, ಪ್ರಶಾಂತ ನಗರದ ಯುವಕರ ಬಳಗ ಸೇರಿ ನಾನಾ ಸಮಿತಿಗಳ ಗಣಪನ ಮೂರ್ತಿಗಳ ಮೆರವಣಿಗೆ ವೈಭವದಿಂದ ನೆರವೇರಿತು.

ಪಟಾಕಿ ಸಿಡಿಸಿ, ವಿವಿಧ ವರ್ಣದ ಕಾಗದಗಳ ಸುರಿಮಳೆಗೈದು ಸ್ವಾಮಿಯನ್ನು ಮಾರ್ಗಗಳಲ್ಲಿ ಸ್ವಾಗತಿಸಲಾಯಿತು. ಡೊಳ್ಳು, ಉರುಮೆ, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ನೂರಾರು ಯುವಕರು ವಾದ್ಯಕ್ಕೆ ತಕ್ಕಂತೆ, ಹಾಡುಗಳ ಸದ್ದಿಗೆ ಮೈಮರೆತು ಕುಣಿದು ಸಂಭ್ರಮಿಸಿದರು. ಇದೇ ವೇಳೆ ಗಣಪತಿಗೆ ಜಯಘೋಷ ಮೊಳಗಿಸಿದರು.

ವಿವಿಧೆಡೆ ಗಣಪತಿ ಸನ್ನಿಧಿಯಲ್ಲಿ ಆರ್ಕೆಸ್ಟ್ರಾ, ರಂಗೋಲಿ, ನೃತ್ಯ ಸ್ಪರ್ಧೆ ಸೇರಿ ನಿತ್ಯ ವೈವಿಧ್ಯಮಯ ಕಾರ್ಯಕ್ರಮ ಜರುಗಿದವು. ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಸುಣ್ಣದಗುಮ್ಮಿ ಸೇರಿ ಇತರೆ ಬಡಾವಣೆಗಳ ಚಿಣ್ಣರು ಕೂಡ ಉತ್ಸಾಹದಿಂದ ಪಾಲ್ಗೊಂಡರು.

1,378 ಗಣೇಶ ವಿಸರ್ಜನೆ: ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಸ್ಥಳಗಳಲ್ಲಿ ಸ್ವಾಮಿಯ ಮೂರ್ತಿಗಳ ವಿಸರ್ಜನೆಯೊಂದಿಗೆ ಹಲವೆಡೆ ಐದು ದಿನ ಪ್ರತಿಷ್ಠಾಪಿಸಿದ್ದ ಮಹೋತ್ಸವ ಸಂಪನ್ನಗೊಳಿಸಿದರು. ಜಿಲ್ಲೆಯಲ್ಲಿ ಒಟ್ಟು 1,644 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಈವರೆಗೂ 1,378 ಮೂರ್ತಿ ವಿಸರ್ಜನೆಯಾಗಿವೆ. ಮೆರವಣಿಗೆ ಅಂಗವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net