ಜಿಲ್ಲಾದ್ಯಂತ ಆಂದೋಲನ ಆ.16ರಿಂದ

yad- meeting
Published on

ಯಾದಗಿರಿ: ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಪ್ರಕರಣಗಳ ಪತ್ತೆಗಾಗಿ ಆ. 16ರಿಂದ ಜಿಲ್ಲಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕುಷ್ಠರೋಗ ಪತ್ತೆ ಹಚ್ಚುವಿಕೆಗಾಗಿ ಜಿಲ್ಲಾದ್ಯಂತ ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ವಿಶೇಷವಾಗಿ ಶ್ರಮಿಸಬೇಕು ಎಂದರು.

ಕುಷ್ಠರೋಗದ ಲಕ್ಷಣಗಳು ಹಾಗೂ ಇದಕ್ಕೆ ಲಭಿಸಲಿರುವ ಚಿಕಿತ್ಸೆ ಪರಿಹಾರ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ವಿದ್ಯಾರ್ಥಿಗಳಿಗೂ ತಪಾಸಣೆ ಮಾಡಬೇಕು. ವಸತಿ ಶಾಲೆಗಳಲ್ಲಿ ಸಹ ವ್ಯಾಪಕವಾಗಿ ಆರೋಗ್ಯ ತಪಾಸಣೆ ಮಾಡಬೇಕು ಎಂದರು.

ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಿ, ಗುಣಮುಖರಾದ ಕುಷ್ಠರೋಗಿಗಳಿಗೆ ಇಲಾಖೆಯಲ್ಲಿ ಸಿಗುವ ವಸತಿ ಸೇರಿ ವಿವಿಧ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಅಮರೇಶ ನಾಯ್ಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗುರುರಾಜ ಹಿರೇಗೌಡರ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಲಕ್ಷ್ಮೀಕಾಂತ ಒಂಟಿಪೀರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಾಜಿದ್, ಡಾ.ಮಲ್ಲಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಭಾಕರ್ ಕವಿತಾಳ, ನಗರಸಭೆ ಆಯುಕ್ತ ಶರಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net