ಜಿಲ್ಲಾದ್ಯಂತ ಅರ್ಭಟಿಸಿದ ಗುಡುಗು ಸಹಿತ ಮಳೆ

Published on

ಬಳ್ಳಾರಿ : ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ತಡರಾತ್ರಿ ಮಳೆ ಸುರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯ ವಿವಿಧಡೆ ಹಳ್ಳ, ಕೊಳ್ಳಗಳು ತುಂಬಿ ಹರಿದರೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಆವರಣ, ಶಾಲಾ ಕಾಲೇಜುಗಳ ಮೈದಾನಗಳು ಸೇರಿದಂತೆ ವಿವಿಧಡೆ ನೀರಿನ ಕೆರೆಗಳಂತೆ ಮಾರ್ಪಾಟ್ಟಿವೆ. ನಗರದ ಕೊಳಗೇರಿ ಪ್ರದೇಶಗಳಲ್ಲಿ ಚರಂಡಿ ನೀರು ತುಂಬಿ, ಕೊಳಕು ನೀರು ಮನೆಗಳನ್ನು ಆವರಿಸಿವೆ. ನಿವಾಸಿಗಳು ನಿದ್ದೆಗೆಟ್ಟು ಚರಂಡಿ ನೀರನ್ನು ಮನೆಯಿಂದ ಹೊರಗೆ ಚೆಲ್ಲುವಂತಾಯಿತು. ಜಿಲ್ಲಾ ಕ್ರೀಡಾಂಗಣ ರಸ್ತೆ ಹಾಗೂ ಎಸ್‌ಎನ್ ಪೇಟೆಯ ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರ ಸಂಚಾರಕ್ಕೆ ಆಡಚಣೆ ಉಂಟು ಮಾಡಿತು. ವಾಹನ ಸವಾರರು ಪರ್ಯಾಯ ರಸ್ತೆಗಳಲ್ಲಿ ಪ್ರಯಾಣಿಸಿದರು. ಅಲ್ಲದೆ, ಮಳೆಯಿಂದಾಗಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ರಾತ್ರಿಯಿಡೀ ಪರದಾಡುವಂತಾಯಿತು. ಗ್ರಾಮೀಣ ಪ್ರದೇಶದಲ್ಲಿ ಗುಡುಗು, ಸಿಡಿಲು ಸಹಿತ ಸುರಿದ ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಜಿಲ್ಲೆಯಲ್ಲಿ ಮೆಣಸಿನಕಾಯಿ, ಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದ ರೈತರಿಗೆ ಕೆಲ ದಿನಗಳಿಂದ ಮಳೆಯಿಲ್ಲದೆ ಬೆಳ ಒಣಗುವ ಭೀತಿಯಲ್ಲಿದ್ದರು. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಭೂಮಿ ತಂಪರೆದಿದ್ದು, ಬೆಳೆಗಳಿಗೆ ನೀರು ಹರಿಸದಂತೆಯಿತು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಗಳಿಗೆ ರಾಸಯನಿಕ ಗೊಬ್ಬರ ಹಾಕಲು ಬೆಳಗಿನ ಜಾವದಿಂದಲೇ ಕೃಷಿ ಚಟುವಟಿಕೆ ಆರಂಭಿಸಿದರು. ಕಳೆದ ಕೆಲ ದಿನಗಳಿಂದ ತಾಪಮಾನದಲ್ಲಿ ದಿಡೀರ್ ಏರಿಕೆಯಾಗಿತ್ತು. ಆದರೆ, ಈಗ ಸುರಿದಿರುವ ಮಳೆ ವಾತಾವರಣವನ್ನು ತಣಿಸಿದೆ. ಸೋಮವಾರ ಕೂಡ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ತುಂಬಿ ಹರಿದ ನಾರಿಹಳ್ಳ : ಸಂಡೂರಿನ ನಾರಿಹಳ್ಳದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿಯತ್ತಿರುವುದರಿಂದ, ಎಲ್ಲ ಕ್ರಸ್ಟ್‌ಗೇಟ್ ತೆರೆದು ಹೊರಗೆ ಹರಿಸಲಾಯಿತು. ಸ್ವಾಮಿ ಮಲೈ, ದೋಣಿ ಮಲೈ ಹಾಗೂ ಕುಮಾರಸ್ವಾಮಿ ಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ. ಅಲ್ಲದೆ, ನಂದಿಹಳ್ಳಿಯ ವಾಷಿಂಗ್ ಪ್ಲಾಂಟ್‌ಗೆ ನೀರು ನುಗಿದ್ದರಿಂದ ಪ್ಲಾಂಟ್‌ನಲ್ಲಿದ್ದ ನೂರರು ಮೈನ್ಸ್ ಲಾರಿಗಳಲ್ಲಿ ನೀರು ತುಂಬಿಕೊಂಡು ಲಾರಿ ಚಾಲಕರು ರಾತ್ರಿಯೀಡಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಬೆಳಗಿನ ಜಾವ ಮಳೆ ಪ್ರಮಾಣ ತಗ್ಗಿದ ನಂತರ, ಪ್ಲಾಂಟ್‌ನಿಂದ ನೀರು ಹೊರ ಹರಿದಂತೆ ಲಾರಿಗಳನ್ನು ಹೊರಗಡೆ ತರಲಾಯಿತು. ಕೆಲವೊಂದು ಲಾರಿಗಳು ಮಳೆಯ ಬಿರುಸಿನ ರಭಸಕ್ಕೆ ಮಣ್ಣಿನಲ್ಲಿ ಹೂತು ಹೋಗಿವೆ.

ಮಳೆ ವಿವರ : ಬಳ್ಳಾರಿ 31.4, ಸಂಡೂರು 57.8, ಸಿರಗುಪ್ಪ 16.9, ಕುರುಗೋಡು 27, ಕಂಪ್ಲಿ 51.5 ಎಂ.ಎಂ ಮಳೆ ಸುರಿದಿದೆ. ಒಟ್ಟಾರೆಯಾಗಿ ಜಿಲ್ಲಾದ್ಯಂತ 37.5 ಮಿಲಿ ಮೀಟರ್ ಮಳೆಯಾಗಿದೆ. ಅಲ್ಲದೆ, ಎಲ್ಲ ತಾಲೂಕುಗಳಲ್ಲಿ ಮಳೆಯ ಪ್ರಮಾಣಕ್ಕಿಂತ ಅಧಿಕ ಮಳೆ ಸುರಿದಿದೆ. ತಡರಾತ್ರಿ ಸುರಿದ ಮಳೆಯಿಂದ ನಗರ, ಸಂಡೂರು ತಾಲೂಕಿನಲ್ಲಿ ತಲಾ ಎರಡು ಮನೆಗಳು ಕುಸಿದಿವೆ. ಜಿಲ್ಲೆಯ ಯಾವುದೆ ಅನಾಹುತಗಳು ಸಂಭವಿಸಿಲ್ಲ ಎಂದು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net