

ಚಿತ್ರದುರ್ಗ: ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದ ಬೆಳೆ ಹಾನಿ, ಆಸ್ತಿಪಾಸ್ತಿ, ಜೀವ ಹಾನಿ ಆಗಿದ್ದು, ಚಿತ್ರದುರ್ಗ ತಾಲೂಕು ಸಾದರಹಳ್ಳಿ, ಲಕ್ಷ್ಮೀ ಸಾಗರ ಗ್ರಾಮಗಳಿಗೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಗುರುವಾರ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿದರು.
ಕೆರೆಗಳ ಕೋಡಿ ಬಿದ್ದು ಸಾದರಹಳ್ಳಿ, ಲಕ್ಷ್ಮೀಸಾಗರದ ಗ್ರಾಮಗಳಲ್ಲೂ, ಮೆಕ್ಕೆಜೋಳ, ಹತ್ತಿ, ರಾಗಿ ಇತ್ಯಾದಿ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಇದರಿಂದ ರೈತರು ಕಂಗೆಟ್ಟಿದ್ದಾರೆ. ಬೆಳೆ ಹಾನಿ ವೀಕ್ಷಿಸಿದ ಸಿಇಒ, ಕೆರೆಕಟ್ಟೆಗಳ ಪರಿಸ್ಥಿತಿಯನ್ನು ಅವಲೋಕಿಸಿದರು.
ಕೃಷಿ ಇಲಾಖೆ ಜ ಂಟಿ ನಿರ್ದೇಶಕ ಬಿ.ಮಂಜುನಾಥ್, ಉಪನಿರ್ದೇಶಕ ಪ್ರಭಾಕರ್, ಶಿವಕುಮಾರ್, ಸಹಾಯಕ ನಿರ್ದೇಶಕ ಚಂದ್ರ ಕುಮಾರ್, ಲಕ್ಷ್ಮೀ ಸಾಗರ ಗ್ರಾಪಂ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಪಿಡಿಒ ಜಯಶೀಲಾ, ಸಾದರಹಳ್ಳಿ ಗ್ರಾಪ ಸದಸ್ಯ ಶಿವಪ್ರಕಾಶ್, ನೀಲಯ್ಯನಹಟ್ಟಿ ಸದಸ್ಯ ಆಲಿ, ಕೃಷಿ ಅಧಿಕಾರಿ ಧನಂಜಯ ಮತ್ತಿತರ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ಮೆಕ್ಕೆಜೋಳ ನಷ್ಟವೇ ಅಧಿಕ
ಸುರಿದ ಹೆಚ್ಚಿನ ಮಳೆಯಿಂದಾಗಿ ಜಿಲ್ಲಾದ್ಯಂತ 664.91 ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳಾದ ಮೆಕ್ಕೆಜೋಳ-102397 ಹೆ., ಶೇಂಗಾ-107013 ಹೆ., ರಾಗಿ-443 98 ಹೆ., ಸಿರಿಧಾನ್ಯಗಳು-30486 ಹೆ., ತೊಗರಿ-21024 ಹೆ., ಹತ್ತಿ-8177 ಹೆ. ಮತ್ತು ಇನ್ನಿತರೆ ಬೆಳೆ ಒಳಗೊಂ ಡಂತೆ 3,19,007 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಮಳೆಯಿಂದ ಜಿಲ್ಲೆಯಲ್ಲಿ ಶೇಂಗಾ-237.60 ಹೆ.,ಮೆಕ್ಕೆಜೋಳ-311.60 ಹೆ., ತೊಗರಿ- 77.40 ಹೆ., ಹತ್ತಿ-16.80 ಹೆ., ರಾಗಿ- 10.40 ಹೆ., ಸಜ್ಜೆ- 3.51 ಹೆ., ಭತ್ತ - 1.60 ಹೆ. ಹಾಗೂ ಇತರೆ ಸೇರಿದಂತೆ 664.91 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
---