ಜಿಲ್ಲಾದ್ಯಂತ 23,340 ಪ್ರಕರಣ ಇತ್ಯರ್ಥ

WhatsApp Image 2023-07-12 at 16.08.29
Published on

ಬೀದರ್: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಜು.8ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆದಿದ್ದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 23,340 ಪ್ರಕರಣ ಇತ್ಯರ್ಥಗೊಳಿಸಿ 10,36,52,476 ರೂ. ವಸೂಲಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಶರೂ ಆದ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕನಕಟ್ಟೆ ತಿಳಿಸಿದರು.
17,521 ಪೆಂಡಿಂಗ್ ಪ್ರಕರಣ ಇತ್ಯರ್ಥಪಡಿಸಿ 8,77,99,058 ರೂ. ವಸೂಲಿ ಮತ್ತು ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ 12,963 ವ್ಯಾಜ್ಯಪೂರ್ವ ಪ್ರಕರಣ ಗುರುತಿಸಿದ್ದು, ಅದರಲ್ಲಿ 5,819 ಇತ್ಯರ್ಥಗೊಳಿಸಿ 1,58,53,418 ರೂ. ವಸೂಲಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬ್ಯಾಂಕ್ ವಸೂಲಿ ಪ್ರಕರಣಗಳಿಗೆ ಸಂಬಂಸಿದಂತೆ 5,454 ಗುರುತಿಸಿ, ಅದರಲ್ಲಿ 111 ಇತ್ಯರ್ಥಗೊಳಿಸಿ 1,05,13,471 ರೂ. ಬಾಕಿ ವಸೂಲಿ ಮಾಡಲಾಗಿದೆ. ಅದೇ ರೀತಿ ನಗರಸಭೆ, ಪುರಸಭೆ, ಗ್ರಾಪಂ ನೀರಿನ ತೆರಿಗೆ ಮತ್ತು ಬಿಎಸ್ಸೆನ್ನೆಲ್, ಜೆಸ್ಕಾಂ ಬಾಕಿ ಬಿಲ್, ಟ್ರಾಫಿಕ್ ಚಾಲನಾ ವಸೂಲಿಯಲ್ಲಿ 5,708 ಪ್ರಕರಣ ಇತ್ಯರ್ಥಗೊಳಿಸಿ 53,39,947 ರೂ. ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಅದಾಲತ್ನಲ್ಲಿ ಮುಖ್ಯವಾಗಿ ವಿಚ್ಛೇದನಕ್ಕಾಗಿ ಕೋಟ್೯ ಮೆಟ್ಟಿಲೇರಿದ ದಂಪತಿ ಪ್ರಕರಣಗಳ ಪೈಕಿ ಬಸವಕಲ್ಯಾಣ ಮತ್ತು ಬೀದರ್ ನಲ್ಲಿ ತಲಾ ಒಂದು ಜೋಡಿಯನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ ಎಂದರು.
ಕಳೆದ ಲೋಕ ಅದಾಲತ್ ನಲ್ಲಿ 19 ಸಾವಿರ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಈ ಬಾರಿ 23,340 ಪ್ರಕರಣ ಇತ್ಯರ್ಥಗೊಳಿಸಿ ಕಳೆದಕ್ಕಿಂತ 4 ಸಾವಿರ ಹೆಚ್ಚು ಕೇಸ್ ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net