

ಚಿತ್ರದುರ್ಗ: ಜಿಲ್ಲಾದ್ಯಂತ ಅತಿವೃಷ್ಟಿಯಿಂದಾಗಿ 914.45 ಹೆಕ್ಟೇರ್ ಕೃಷಿ ಹಾಗೂ 241.80 ತೋಟಗಾರಿಕೆ ಬೆಳೆ ಸೇರಿ ಒಟ್ಟು 1,156.25 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ.
ಚಿತ್ರದುರ್ಗ ತಾಲೂಕಿನಲ್ಲಿ 267.27, ಚಳ್ಳಕೆರೆ-567.87, ಹಿರಿಯೂರು-197.50, ಮೊಳಕಾಲ್ಮೂರು ತಾಲೂಕಿನಲ್ಲಿ 123.61 ಹೆಕ್ಟೇರ್ ಬೆಳೆ ನಾಶವಾಗಿದೆ. ಜಂಟಿ ಸಮೀಕ್ಷಾ ತಂಡ ಸ್ಥಳ ಪರಿಶೀಲಿಸಿ, ಬೆಳೆ ಹಾನಿ ಮಾಹಿತಿ ನೀಡಿದೆ.
ಬೆಳೆಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಆಯಾ ತಾಲೂಕು ತಹಸೀಲ್ದಾರ್ ಕಚೇರಿ, ಗ್ರಾಪಂ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಬುಧವಾರ ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಸಂಬಂಧಿಸಿದ ತಹಸೀಲ್ದಾರ್, ಕೃಷಿ, ತೋಟಗಾರಿಕೆ ಇಲಾಖೆಯ ಕಚೇರಿಗೆ ಪ್ರಕಟಿಸಲಾದ 7 ದಿನದೊಳಗೆ ಸಲ್ಲಿಸಬಹುದು.
ಈ ಅವಧಿಯಲ್ಲಿ ಯಾವ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ, ಪಟ್ಟಿಯನ್ನು ಅಂತಿಮಗೊಳಿಸಿ ನಿಯಮಾನುಸಾರ ಪರಿಹಾರ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.