

ಚಿತ್ರದುರ್ಗ: ಜಿಲ್ಲಾದ್ಯಂತ ಈ ಬಾರಿ ಜೂ. 10ರಿಂದ 20ರವರೆಗೆ ಯೋಗೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆಯುಷ್ ಆಡಳಿತಾಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ತಿಳಿಸಿದ್ದಾರೆ.
21ರಂದು ನಡೆಯಲಿರುವ 10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯುಷ್ ಇಲಾಖೆ, ನಗರದ ವಿವಿಧ ಯೋಗ ಸಂಘ-ಸಂಸ್ಥೆಗಳಲ್ಲಿನ ಪದಾಧಿಕಾರಿಗಳ ಸಹಕಾರ ಪಡೆದು ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ, ವಸತಿ ಶಾಲೆಗಳು, ನವೋದಯ ಸ್ಕೂಲ್, ಪೊಲೀಸ್ ಅಕಾಡೆಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
15ರಂದು ಜಿಲ್ಲೆಯ ಎಲ್ಲ ಮುರಾರ್ಜಿ ದೇಸಾಯಿ, ಇಂದಿರಾಗಾಂಧಿ, ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಹಾಗೂ 16ರಂದು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಪ್ರತಿ ಸಂಸ್ಥೆಗೆ ತಲಾ ಒಬ್ಬ ಆಯುಷ್ ವೈದ್ಯಾಧಿಕಾರಿ, ಹಾಗೂ ಯೋಗ ಸಂಸ್ಥೆಯ ತರಬೇತುದಾರರನ್ನು ನಿಯೋಜಿಸಲಾಗಿದೆ. ಇವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಮತ್ತು ಆಯುಷ್ ಪದ್ಧತಿಯಿಂದಾಗುವ ಅನುಕೂಲಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಮೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬಾಪೂಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬ್ರಹ್ಮಕುಮಾರಿ ಸಮಾಜ, ಪತಾಂಜಲಿ ಯೋಗ ಶಿಕ್ಷಣ ಸಂಸ್ಥೆ, ಆರ್ಟ್ ಆಫ್ ಲೀವಿಂಗ್, ಪತಂಜಲಿ ಯೋಗ ಸಂಸ್ಥೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಯೋಗ ಕಾರ್ಯಕ್ರಮಕ್ಕೆ ಜಿಲ್ಲಾ ಆಯುಷ್ ಇಲಾಖೆಯೊಂದಿಗೆ ಸಾಥ್ ನೀಡಲಿದ್ದಾರೆ.