ಜಿಲ್ಲಾಡಳಿತದಿಂದ ಅಣಕು ಪ್ರದರ್ಶನ

16rajesh10
Published on

ಚಾಮರಾಜನಗರ: ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಬಳಿ ಹಾಗೂ ಎದುರಿನ ಉದ್ಯಾನವನದಲ್ಲಿ ಬಾಂಬ್ ಬ್ಲಾಸ್ಟ್‌ನಿಂದ ಗಾಯಗೊಂಡ ನೂರಾರು ಜನರು, ಸಮರೋಪಾಧಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ತುರ್ತು ಸಂದರ್ಭದಲ್ಲಿ ನಾಗರೀಕರನ್ನು ರಕ್ಷಿಸುವ ಸಂಬಂಧ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನ (ಮಾಕ್ ಡ್ರಿಲ್) ದಲ್ಲಿ ಕಂಡುಬಂದ ದೃಶ್ಯಗಳಿವು.

ನಗರದ ಹೃದಯ ಭಾಗದಲ್ಲಿರುವ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಒಳಭಾಗದಲ್ಲಿ ಸಂಜೆ 6 ಗಂಟೆಯ ವೇಳೆಗೆ ಬಾಂಬ್‌ಬ್ಲಾಸ್ಟ್ ಆಯಿತು. ಉದ್ಯಾನವನದ ಬಳಿಯೂ ಏಕಕಾಲಕ್ಕೆ ಹಲವಾರು ಬಾರಿ ಬಾಂಬ್ ಸಿಡಿಯಿತು. ಕ್ಷಣ ಮಾತ್ರದಲ್ಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ಮುಂದೆ ಆಗಬಹುದಾದ ಅನಾಹುತಗಳನ್ನು ತಡೆದರು. ಬಳಿಕ ಆಗಮಿಸಿದ ರಕ್ಷಣಾ ತಂಡದವರು ಬಾಂಬ್ ಬ್ಲಾಸ್ಟ್‌ನಲ್ಲಿ ಸಿಲುಕಿದ್ದ ನೂರಕ್ಕಿಂತಲೂ ಹೆಚ್ಚು ಜನರನ್ನು ಸಮರೋಪಾಧಿಯಲ್ಲಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಆರೋಗ್ಯ ಇಲಾಖೆಯ ತಂಡದವರು ಆಗಮಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದರು.

ಈ ವೇಳೆ ಸ್ಥಳದಲ್ಲೇ ಬೆಂಕಿ ಹೊತ್ತಿ ಉರಿಯಿತು, ತತ್‌ಕ್ಷಣವೇ ಅಗ್ನಿಶಾಮಕ ತಂಡದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬಾಂಬ್ ಬ್ಲಾಸ್ಟ್‌ಗೆ ಸಿಲುಕಿದ್ದ ನೂರು ಜನರಲ್ಲಿ 22 ಜನರು ತೀವ್ರವಾಗಿ ಗಾಯಗೊಂಡರು, 15 ಜನರಿಗೆ ಸಣ್ಣಪುಟ್ಟ ಗಾಯಗಳಾಯಿತು. ಉಳಿದಂತೆ ಇತರರನ್ನು ಅಗ್ನಿಶಾಮಕ ಇಲಾಖೆಯ ತಂಡ, ಪೊಲೀಸ್ ತಂಡ ಹಾಗೂ ಆರೋಗ್ಯ ಇಲಾಖೆಯ ತಂಡದವರು ರಕ್ಷಣೆ ಮಾಡಿದರು. ಈ ಎಲ್ಲವನ್ನೂ ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದ ಸಾರ್ವಜನಿಕರಿಗೆ ನಿಜಕ್ಕೂ ಬಾಂಬ್ ಬ್ಲಾಸ್ಟ್ ಆಗಿದೆಯೋ, ಇಲ್ಲವೋ ಎಂಬ ಗೊಂದಲದಲ್ಲಿ ತದೇಕಚಿತ್ತದಿಂದ ರಕ್ಷಣಾ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದರು.

ಈ ಅಣಕು ಪ್ರದರ್ಶನದಲ್ಲಿ ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗೃರಕ್ಷಕದಳ ಹಾಗೂ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಹಳ ನೈಜವಾಗಿ ಭಾಗವಹಿಸಿದ್ದರು. ಈ ವೇಳೆ ನಗರಸಭೆ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಹಾಗೂ ಇತರರು ಭಾಗವಹಿಸಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಯುದ್ಧದ ಭೀತಿಯಿಂದಾಗಿ ರಾಜ್ಯಸರ್ಕಾರ ನಾಗರೀಕರ ರಕ್ಷಣೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಮಾಕ್‌ಡ್ರಿಲ್ ನಡೆಸುವಂತೆ ನೀಡಿದ್ದ ಸೂಚನೆಯ ಮೇರೆಗೆ ಅಣಕು ಪ್ರದರ್ಶನ ನಡೆಸಲಾಗಿದೆ. ಇದರಲ್ಲಿ ಭಾಗಿಯಾದ ವಿವಿಧ ಇಲಾಖೆಗಳ ಅಧಿಕಾರಿಗಳು ನೈಜ ಚಿತ್ರಣ ಕಟ್ಟಿಕೊಟ್ಟರು. ಸಾರ್ವಜನಿಕರಲ್ಲಿ ಈ ಮೂಲಕ ಜಾಗೃತಿ ಮೂಡಿಸಲಾಗಿದೆ.

-ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net