

ರಾಜೇಂದ್ರ ಶಿಂಗನಮನೆ ಶಿರಸಿ
ಧರ್ವತೀತವಾದ ಸರ್ಕಾರಿ ಉತ್ಸವಕ್ಕೆ ಹಿಂದು ದೇವಾಲಯಗಳಿಂದ ದೇಣಿಗೆ ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತದ ನಡೆಗೆ ದೇವಾಲಯಗಳ ಆಡಳಿತ ಸಮಿತಿಗಳ ಜತೆಗೆ ಹಿಂದು ಧರ್ವಿುಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಆದಿಕವಿ ಪಂಪನ ನೆಲೆವೀಡಾದ ಉತ್ತರ ಕನ್ನಡದ ಬನವಾಸಿಯಲ್ಲಿ ಫೆ. 8 ಹಾಗೂ 9ರಂದು ಆಯೋಜಿಸಿರುವ ಕದಂಬೋತ್ಸವಕ್ಕೆ ಅನುದಾನ ಕೊರತೆ ಎದುರಾದ ಕಾರಣ ಮುಜರಾಯಿ ಇಲಾಖೆ ಮೂಲಕ ಉತ್ತರ ಕನ್ನಡ ಜಿಲ್ಲಾಡಳಿತವು ಇಲಾಖೆ ಅಧೀನದ ದೇವಾಲಯಗಳಿಗೆ 1 ಲಕ್ಷ ರೂ. ದೇಣಿಗೆ ನೀಡುವಂತೆ ಸೂಚನೆ ನೀಡಿತ್ತು. ಈ ಕುರಿತು ಜ. 30ರಂದು ಸುತ್ತೋಲೆ ಹೊರಡಿಸಿ ಫೆ. 2ರೊಳಗೆ ದೇಣಿಗೆ ಮೊತ್ತವನ್ನು ಜಿಲ್ಲಾಧಿಕಾರಿ ಖಾತೆಗೆ ಚೆಕ್ ಮೂಲಕ ನೀಡುವಂತೆ ಆದೇಶಿಸಿತ್ತು.
ಈಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ದೇಣಿಗೆ ನೀಡುವುದು ಒತ್ತಾಯ ಪೂರ್ವಕವಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ನಡೆಸಿದೆ. ದೇವಾಲಯಗಳಿಗೆ ದೇಣಿಗೆ ಕಡ್ಡಾಯಗೊಳಿಸಿಲ್ಲ. ಬಲವಂತದಿಂದ ಯಾರೂ ಸಂಗ್ರಹ ಮಾಡುತ್ತಿಲ್ಲ. ಆಸಕ್ತ ದೇವಾಲಯಗಳು ಕೊಡಬಹುದು ಎಂದು ಜಿಲ್ಲಾಡಳಿತದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. ಆದರೆ, ದೇವಾಲಯಗಳಿಗೆ ಬಂದ ಸುತ್ತೋಲೆಯಲ್ಲಿ ದೇಣಿಗೆ ಒತ್ತಾಯಪೂರ್ವಕವಲ್ಲ ಎಂದು ನಮೂದಿಸಿಲ್ಲ. ಫೆ. 2ರೊಳಗೆ ದೇಣಿಗೆ ಮೊತ್ತ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ, ಕೆಲ ದೇವಾಲಯಗಳ ಸಮಿತಿಗಳು ದೇವಾಲಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಅನಿವಾರ್ಯವಾಗಿ ಉತ್ಸವ ಆಚರಣೆಗೆ ನೀಡಿದ್ದಾರೆ. ಇನ್ನೂ ಕೆಲ ದೇವಾಲಯಗಳ ಪ್ರಮುಖರು ಅತ್ತ ಹಣವನ್ನೂ ನೀಡಲಾಗದೆ, ಇತ್ತ ಜಿಲ್ಲಾಡಳಿತದ ಒತ್ತಡವನ್ನೂ ಸಹಿಸಲಾಗದೆ ಕಂಗಾಲಾಗಿದ್ದಾರೆ.
ಇನ್ನು ಹಿಂದು ಭಕ್ತರು ದೇವಾಲಯಕ್ಕೆ ನೀಡಿದ ಹಣವನ್ನು ಉತ್ಸವ ಆಚರಣೆಗೆ ಬಳಕೆ ಮಾಡುತ್ತಿರುವ ವಿಚಾರವು ಸಾಮಾಜಿಕ ಸಾಮರಸ್ಯ ಹದಗೆಡಿಸಲು ಕಾರಣವಾಗುತ್ತಿದೆ. ಉತ್ಸವದ ಅಂಗವಾಗಿ ಹಾಕುವ ಮಳಿಗೆಗಳು, ಉತ್ಸವದ ವಿವಿಧ ಗುತ್ತಿಗೆ ಕಾಮಗಾರಿಗಳು, ಕಲಾವಿದರು, ಪ್ರೇಕ್ಷಕರು ಸೇರಿ ಎಲ್ಲ ಧರ್ವಿುಯರೂ ಉತ್ಸವದಲ್ಲಿ ಸಮನಾಗಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಕೇವಲ ಹಿಂದು ದೇವಾಲಯಗಳ ಹಣಕ್ಕೆ ಬೇಡಿಕೆಯಿಡುವ ಬದಲು ಕದಂಬೋತ್ಸವವು ಸರ್ಕಾರಿ ಉತ್ಸವವಾಗಿದ್ದರಿಂದ ಎಲ್ಲ ಧರ್ವಿುಯರ ಸಹಾಯ ಪಡೆದರೆ ಇನ್ನೂ ಅದ್ದೂರಿಯಿಂದ ಉತ್ಸವ ಆಚರಿಸಬಹುದು. ಜತೆಗೆ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡು ಐತಿಹಾಸಿಕ ಕ್ಷೇತ್ರ ಬನವಾಸಿಯ ಹೆಸರನ್ನು ನಾಡಿನಾದ್ಯಂತ ಎತ್ತರಿಸಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಹಿಂದು ಜಾಗರಣ ವೇದಿಕೆ ವಿರೋಧ: ಕಾರವಾರ: ಕದಂಬೋತ್ಸವಕ್ಕೆ ದೇವಸ್ಥಾನಗಳಿಂದ ದೇಣಿಗೆ ಕೇಳಿದ ಜಿಲ್ಲಾಡಳಿತದ ಕ್ರಮವನ್ನು ಹಿಂದು ಜಾಗರಣ ವೇದಿಕೆ ವಿರೋಧಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ವೇದಿಕೆ ಅಧ್ಯಕ್ಷ ಬಿ.ಎಸ್.ಪೈ ಅವರು, ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ ಹಾಗೂ ಪಂಪ ಪ್ರಶಸ್ತಿ ಪ್ರದಾನವನ್ನು ಮೊದಲಿನಿಂದಲೂ ಸರ್ಕಾರದ ಖರ್ಚಿನಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಕನ್ನಡದ ನಡೆ, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಅದು ಸಿನೆಮಾ ಹಾಡುಗಳ ಆರ್ಕೆಸ್ಟ್ರಾ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ. ಆದರೆ, ಅದಕ್ಕೆ ಮುಜರಾಯಿ ಇಲಾಖೆಯಡಿ ಇರುವ ದೇವಾಲಯಗಳಿಂದ ತಲಾ 1 ಲಕ್ಷ ರೂ. ದೇಣಿಗೆ ನೀಡುವಂತೆ ಆದೇಶಿಸಲಾಗಿದೆ. ದೇವಸ್ಥಾನಗಳಿಗೆ ಭಕ್ತಾದಿಗಳು ನೀಡಿದ ಹಣ ದೇವಾಲಯಗಳ ಜೀಣೋದ್ಧಾರಕ್ಕೆ ಬಳಕೆಯಾಗಬೇಕು. ಆದರೆ, ಅದು ಸರ್ಕಾರಿ ಕಾರ್ಯಕ್ರಮವೊಂದರ ಮೋಜು, ಮಸ್ತಿಗೆ ದುರುಪಯೋಗವಾಗುತ್ತಿರುವುದು ಖೇದಕರ ಸಂಗತಿ. ಅದನ್ನು ಹಿಂಜಾವೇ ಖಂಡಿಸುತ್ತದೆ ಎಂದಿದ್ದಾರೆ.