

ಬಾಗಲಕೋಟೆ: ವಿಶ್ವ ಯುವ ಕೌಶಲ ದಿನಾಚರಣೆ ಅಂಗವಾಗಿ ಶಿಕ್ಷಣದಲ್ಲಿ ಕೌಶಲ ಅಭಿವೃದ್ಧಿಯ ಪ್ರಾಮುಖ್ಯತೆ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಸೀಮಾ ಲಮಾಣಿಗೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅವರು ತಮ್ಮ ಕಚೇರಿಯಲ್ಲಿ ಬುಧವಾರ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಅಲ್ಲದೆ ತಮ್ಮ ಜೊತೆಯಲ್ಲಿಯೇ ಇರಿಸಿಕೊಂಡು ಜಿಲ್ಲಾಧಿಕಾರಿ ಕಾರ್ಯ ವೀಕ್ಷಣೆ ಹಾಗೂ ಜಿಲ್ಲಾಡಳಿತದ ಕಾರ್ಯವೈಖರಿ ಅರಿಯುವ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ತಮ್ಮ ವಿದ್ಯಾಭ್ಯಾಸ, ಯುಪಿಎಸ್ಸಿ ಪರೀಕ್ಷೆ ಕುರಿತು ವಿದ್ಯಾರ್ಥಿನಿಗೆ ಮಾಹಿತಿ ನೀಡಿದರು. ಮಹಿಳಾ ಸಶಕ್ತೀಕರಣದ ಮಹತ್ವ, ಧಾರ್ಮಿಕ ಮತ್ತು ವೈಚಾರಿಕತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿಸಿದರು.
ತನ್ನ ಪರಿಚಯ ಮಾಡಿಕೊಂಡ ವಿದ್ಯಾರ್ಥಿನಿ ಸೀಮಾ, ತಾನು ಮೂಲತಃ ಬೀಳಗಿ ತಾಲೂಕಿನ ಮುತ್ತಲದಿನ್ನಿ ಗ್ರಾಮದವಳಾಗಿದ್ದು, ಸದ್ಯ ನವನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿಎಸ್ಸ್ಸಿ ಎರಡನೇ ಸಮೆಸ್ಟರ್ ಓದುತ್ತಿದ್ದೇನೆ. ಎಂ.ಎಸ್.ಸಿ ಸ್ನಾತಕೊತ್ತರ ಪದವಿ ಪಡೆದು ಉತ್ತಮ ಉಪನ್ಯಾಸಕಿ ಆಗಬೇಕೆಂಬ ಆಸೆ ಹೊಂದಿದ್ದೇನೆ ಎಂದು ತಿಳಿಸಿದಳು.
ಇನ್ನು ಜಿಲ್ಲಾಧಿಕಾರಿ ಬುಧವಾರ ಕೆರೆ ಒತ್ತುವರಿ ತೆರವುಗೊಳಿಸುವ ಸಭೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡಾವಳಿಗಳನ್ನು ಸೀಮಾ ಲಮಾಣಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ವಿ.ಎಸ್.ಹೀರೆಮಠ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.