

ವಾದಿರಾಜ ವ್ಯಾಸಮುದ್ರ ಕಲಬುರಗಿ: ಮಹಾಮಾರಿ ಕರೊನಾ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತಕ್ಕೆ ಹೊಸ ಕ್ವಾರಂಟೈನ್ ಕೇಂದ್ರಗಳ ಪತ್ತೆ ದೊಡ್ಡ ತಲೆನೋವು ತಂದಿಟ್ಟಿದೆ. ನಗರದ ಕೆಲವೆಡೆ ಕೇಂದ್ರಗಳನ್ನು ಆರಂಭಿಸಬೇಕೆಂದರೆ ಆಯಾ ಬಡಾವಣೆ ಜನತೆ ವ್ಯಾಪಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದೇ ಈ ತಲೆನೋವಿಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದೆ. ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರನ್ನು ಸಹ ಆಸ್ಪತ್ರೆಗೆ ಸೇರಿಸುತ್ತಿದ್ದರೆ, ಎರಡನೇ ಹಂತದ ಸಂಪರ್ಕಕ್ಕೆ ಬಂದವರು ಮತ್ತು ಹೊರರಾಜ್ಯ ಇಲ್ಲವೇ ಹೊರ ಜಿಲ್ಲೆಗಳಿಂದ ಬಂದವರನ್ನು ಬೇರೆ ಬೇರೆ ಕಡೆ ಕ್ವಾರಂಟೈನ್ ಮಾಡಲು ನಿರ್ಧರಿಸಿರುವ ಜಿಲ್ಲಾಡಳಿತ ಅದಕ್ಕಾಗಿ ಖಾಲಿ ಇರುವ ಸರ್ಕಾರಿ ಕಟ್ಟಡ, ಸರ್ಕಾರಿ ಹಿಂದುಳಿದ ವರ್ಗಗಳ ವಸತಿ ಕೇಂದ್ರಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಬಹುತೇಕ ಸರ್ಕಾರಿ ಕಟ್ಟಡಗಳು ನಗರ ಮಧ್ಯ ಭಾಗದ ಪ್ರಮುಖ ಬಡಾವಣೆಗಳಲ್ಲಿ ಇರುವುದರಿಂದ ಕ್ವಾರಂಟೈನ್ ಕೇಂದ್ರ ಮಾಡುವ ವಿಷಯ ತಿಳಿಯುತ್ತಲೇ ಆಯಾ ಬಡಾವಣೆ ಜನರಿಗೆ ಹೆದರಿಕೆ ಆಗಿಬಿಟ್ಟಿದೆ. ಈ ಬಡಾವಣೆಗಳಲ್ಲಿ ಅನೇಕ ವೈದ್ಯರ, ನಾನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇತರ ಸಿಬ್ಬಂದಿ ಮನೆಗಳಿವೆ. ಹೀಗಾಗಿ ತಮ್ಮ ಬಡಾವಣೆಯ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಿದರೆ, ಅದರಲ್ಲಿ ಇರುವವರಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ದೃಢಪಟ್ಟರೆ ಎಲ್ಲಿ ತಮಗೂ ಅಂಟಿಕೊಳ್ಳುತ್ತೋ ಎಂಬ ಭಯ ಅವರನ್ನು ಕಾಡುತ್ತಿದೆ.
ಅಂತೆಯೇ ತಮ್ಮ ಬಡಾವಣೆಗಳಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಬೇಡಿ ಎಂದು ಆಗ್ರಹಿಸಿ ಜನತೆ ಸಂಬಂಧಿತ ಅಧಿಕಾರಿಗಳಿಗೆ ಮನವಿಪತ್ರ ಕೊಡುತ್ತಿದ್ದಾರೆ. ಕೆಲ ಬಡಾವಣೆಗಳವರು ತಮ್ಮ ಪ್ರದೇಶಗಳಿಗೆ ಹೊರಗಡೆಯವರು ಯಾರೂ ಬರದಂತೆ ಪ್ರವೇಶ ದ್ವಾರ (ರಸ್ತೆ)ಗಳಳಿಗೆ ಮುಳ್ಳು-ಕಂಟಿ, ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿ ಬಂದ್ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ಸಹ ನಡೆಸುತ್ತಿದ್ದಾರೆ.
ಜಿಲ್ಲಾಡಳಿತ ಕೆಲವು ದೊಡ್ಡ ದೊಡ್ಡ ಲಾಡ್ಜ್ಗಳನ್ನು ಸಹ ಕ್ವಾರಂಟೈನ್ಗಾಗಿ ಬಳಸಲು ಮುಂದೆ ಬಂದಿದೆ. ಲಭ್ಯ ಮಾಹಿತಿ ಪ್ರಕಾರ ನಗರದ ಪ್ರಮುಖ ವಸತಿ ಗೃಹಗಳನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ವಸತಿಗೃಹಗಳ ಮಾಲೀಕರಿಗೆ ಜಿಲ್ಲಾಡಳಿತದ ನಿರ್ಧಾರ ಇತ್ತ ಉಗುಳಲೂ ಬಾರದೆ, ಅತ್ತ ನುಂಗಲೂ ಆಗದಂಥ ಸ್ಥಿತಿ ತಂದೊಡ್ಡಿದೆ. ವಸತಿ ಗೃಹಗಳನ್ನು ಕೊಡದಿದ್ದರೆ ಮುಂದೆಲ್ಲಿ ತಮಗೆ ತೊಂದರೆ ಆಗುತ್ತದೋ ಎಂಬ ಭಯವೂ ಅವರಲ್ಲಿ ಮನೆ ಮಾಡಿದೆ.
ಹಳೇ ಜೇವರ್ಗಿ ರಸ್ತೆ ಕೆಳಸೇತುವೆಯಿಂದ ಬಿದ್ದಾಪುರ ಕಾಲನಿಗೆ ಹೋಗುವ ರಸ್ತೆಯಡಿ ಲೋಕೋಪಯೋಗಿ ಇಲಾಖೆಯ ಕೆಲವು ಕಟ್ಟಡಗಳಿದ್ದು, ಕ್ವಾರಂಟೈನ್ಗಾಗಿ ಅವುಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ಅಲ್ಲಿಯ ನಾಗರಿಕರು ಪ್ರತಿಭಟನೆಗೆ ಇಳಿದು ರಸ್ತೆಯನ್ನೇ ಬಂದ್ ಮಾಡಿದರು. ಕ್ರಮೇಣ ಆ ರಸ್ತೆ ಮತ್ತೆ ಸಂಚಾರಕ್ಕೆ ಮುಕ್ತವಾಯಿತು ಎಂಬುದು ಬೇರೆ ಮಾತು.
ಶುಕ್ರವಾರ ದತ್ತಾತ್ರೇಯ ಪಾಟೀಲ್ ಬಡಾವಣೆಯಲ್ಲಿ ಸರ್ಕಾರಕ್ಕೆ ಸೇರಿದ ವಸತಿ ಗೃಹವೊಂದಿದೆ. ಇದನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ವಿಷಯ ತಿಳಿಯುತ್ತಲೇ ಬಡಾವಣೆ ಜನ ಪ್ರತಿಭಟನೆ ನಡೆಸಿ ಕಾಲನಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿಬಿಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಮುಂದೇನು ಮಾಡಬೇಕು ಎಂಬುದು ಜಿಲ್ಲಾಡಳಿತಕ್ಕೆ ತೋಚುತ್ತಿಲ್ಲ. ಇದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.