

ಮದ್ದೂರು: ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದ ದಲಿತ ಯುವಕನ ಸಾವಿಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆರೋಪಿಸಿ ಪಟ್ಟಣದ ತಾಲೂಕು ಕಚೇರಿ ಎದುರು ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಪುರಸಭೆ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ತಾಲೂಕು ಕಚೇರಿ ಎದುರು ಜಮಾಯಿಸಿದ ದಲಿತ ಮುಖಂಡರು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮಾತನಾಡಿ, ಕತ್ತರಘಟ್ಟ ಗ್ರಾಮದ ಯುವಕ ಜಯಕುಮಾರ್ ಸಾವು ವಿಕೃತ ಘಟನೆಯಾಗಿದ್ದು, ಜಮೀನಿನ ವಿಚಾರವಾಗಿ ಗಲಾಟೆಯಾಗಿತ್ತು. ಜಯಕುಮಾರ್ ಸಾಯುವ ಮುನ್ನಾ ದಿನ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸಲಿಲ್ಲ. ಹೀಗಾಗಿ ಈ ಕೃತ್ಯಕ್ಕೆ ಪೋಲಿಸರೇ ನೇರ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ಸಂಬಂಧ ಪುಟ್ಟ ಪೋಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮವಾಗಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೃತ ಜಯಕುಮಾರನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50 ಲಕ್ಷ ರೂ.ಪರಿಹಾರ ನೀಡಬೇಕು. ಆತನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಕೊಲೆ ಮಾಡಿರುವ ವ್ಯಕ್ತಿಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಗಲ್ಲು ಶಿಕ್ಷೆ ನೀಡಬೇಕು. ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಾ.ಸ್ಮಿತಾರಾಮು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶಂಕರ್, ಮಾದೇಶ್, ಅಂಬರೀಷ್, ಮುತ್ತಯ್ಯ, ಬಸವರಾಜು, ವೆಂಕಟೇಶ್, ಶಿವು, ಆನಂದ್, ಅಣ್ಣೂರು ರಾಜಣ್ಣ, ರಂಗಸ್ವಾಮಿ, ಡಿ.ಕೆ.ಕೃಷ್ಣ, ನಗರಕೆರೆ ಜಗದೀಶ್, ಸಣ್ಣಮ್ಮ ಇದ್ದರು.