

ಬೀದರ್: ಸಂಕ್ರಾಂತಿಯು ರೈತ ವರ್ಗದಲ್ಲಿ ಸಂಭ್ರಮ ತರುವ ಹಬ್ಬವಾಗಿದೆ. ಹೀಗಾಗಿ ಈ ಉತ್ಸವ ಪ್ರತಿವರ್ಷ ಜಿಲ್ಲಾಡಳಿತದಿಂದ ಆಚರಿಸಬೇಕು ಎಂದು ನೌಬಾದ್ ಜ್ಞಾನಶಿವಯೋಗಾಶ್ರಮದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.
ನಗರದ ಲಕ್ಷ್ಮೀಬಾಯಿ ಕಮಠಾಣೆ ಕಾಲೇಜಿನಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನಿಂದ ಏರ್ಪಡಿಸಲಾಗಿದ್ದ ಸಂಕ್ರಾಂತಿ ಸಂಭ್ರಮ ನಿಮಿತ್ತ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಅನ್ನದಾತರ ಹರುಷದ ಹಬ್ಬ ಸಂಕ್ರಾಂತಿ. ರೈತರ ಉತ್ಸವ ಜಿಲ್ಲಾಡಳಿತದಿಂದ ಆಚರಿಸಿದರೆ ಮತ್ತಷ್ಟು ಮೆರಗು ತರಲು ಸಾಧ್ಯ ಎಂದರು.
ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಹಬ್ಬ, ಉತ್ಸವಗಳಿಗೆ ಆದ್ಯತೆ ಕೊಡುವ ಬದಲು ಮೊಬೈಲ್ ಮೂಲಕ ಸಂದೇಶ ಕಳಿಸಿ ಇಂದಿನ ಪೀಳಿಗೆ ನಮ್ಮ ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯ. ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಇಂಥ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಬುಡಾ ಅಧ್ಯಕ್ಷ ಬಾಬು ವಾಲಿ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ಸಾಳೆ, ಕೇಂದ್ರ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯಾ ಸ್ವಾಮಿ, ಬಸವತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ, ದಿಲೀಪ ಕಮಠಾಣೆ, ಕವಿರಾಜ ಕೋಡಗೆ, ಆನಂದ ಕಾರಬಾರಿ, ದತ್ತು ಬಾವಗೆ, ಪಾಂಡುರಂಗ ಪಾಂಚಾಳ, ಸಂತೋಷ, ಬಿರಾದಾರ ಇತರರಿದ್ದರು. ಸುಭಾಷ ಬಿರಾದಾರ ಸ್ವಾಗತಿಸಿದರು.
41 ಮಹಿಳೆಯರು ಭಾಗಿ
ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ 41 ಮಹಿಳೆಯರು ಭಾಗವಹಿಸಿದ್ದರು. ಚುಕ್ಕೆ ಗುರುತಿನ ರಂಗೋಲಿ ಸ್ಪರ್ಧೆಯಲ್ಲಿ ಗೋಕರ್ಣಾ ಉಮಾಕಾಂತ (ಪ್ರಥಮ), ಜಯಶ್ರೀ ಪಾಂಡುರಂಗ ಪಾಂಚಾಳ (ದ್ವಿತೀಯ), ವಿಜಯಲಕ್ಷ್ಮೀ ಗಣಪತಿ (ತೃತೀಯ). ಫ್ರೀ ಹ್ಯಾಂಡ್ ಸ್ಪರ್ಧೆಯಲ್ಲಿ ಸಂಗೀತಾ ಗಂಗಾರಾಮ (ಪ್ರಥಮ), ಪೂಜಾ ಪಾಂಚಾಳ (ದ್ವಿತೀಯ), ರಾಧಾ ಜವಾಹರ (ತೃತೀಯ) ಸ್ಥಾನ ಪಡೆದರು. ವಿಜೇತರಿಗೆ ಟ್ರಸ್ಟ್ ನಿಂದ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಇತರೆ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಲಾಯಿತು. ಯೋಗೀಶ ಚಿತ್ರಕಲಾ ಕಾಲೇಜಿನ ಕಾರ್ಯದರ್ಶಿ ಯೋಗೀಶ ಮಠದ್, ಸುನೀಲ್ ಸಾಗರ ನಿರ್ಣಾಯಕರಾಗಿದ್ದರು.