

ಯಾದಗಿರಿ: ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕರೊನಾ ವೈರಸ್ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಜನತೆ ಅನಗತ್ಯವಾಗಿ ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾಧ್ಯಕ್ಷ ಡಾ.ಸಿ.ಎಂ.ಪಾಟೀಲ್ ಸಲಹೆ ನೀಡಿದ್ದಾರೆ.
ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಬಗ್ಗೆ ಕಪೋಲಕಲ್ಪಿತ ವಿಷಯಗಳನ್ನು ಬಿತ್ತರಿಸುತ್ತಿದ್ದು, ಜನತೆ ಕಿವಿಗೊಡಬಾರದು. ಅಲ್ಲದೆ ಕರೊನಾ ವೈರಸ್ 23ರಿಂದ 27 ಡಿಗ್ರಿ ಸೆಲ್ಸಿಯಸ್ನಲ್ಲಿ ಮಾತ್ರ ಬದುಕಿರುತ್ತದೆ ಎಂಬೆಲ್ಲ ಸಂದೇಶ ಹರಿದಾಡುತ್ತಿದ್ದು, ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇಂತಿಷ್ಟು ಸೆಲ್ಸಿಯಸ್ನಲ್ಲಿ ಬದುಕಿರುತ್ತದೆ ಎಂದು ಹೇಳಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನೆಗಡಿ, ಜ್ವರ ಲಕ್ಷಣ ಮತ್ತು ಶ್ವಾಸಕೋಸ ಸಂಬಂಧಿ ಪೀಡಿತರ ನಿಕಟ ಸಂಪರ್ಕದಿಂದ ದೂರವಿರಬೇಕು. ಮುಖ್ಯವಾಗಿ ವಿದೇಶದಿಂದ ಬರುವವರಲ್ಲಿ ಈ ವೈರಸ್ ಕಂಡು ಬರುತ್ತಿದ್ದು, ನಮ್ಮಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಪ್ರತಿ ಗಂಟೆಗೊಮ್ಮೆ ಕನಿಷ್ಠ 20 ಸೆಕೆಂಡ್ ಎರಡೂ ಕೈಗಳನ್ನು ಸಾಬೂನಿನಿಂದ ಶುಭ್ರವಾಗಿ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮ ಕನಸು ಕಲ್ಯಾಣ ಸಂಸ್ಥೆ ಅಧ್ಯಕ್ಷ ಡಾ.ವೀರೇಶ ಜಾಕಾ ಮಾತನಾಡಿ, ಕರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸಮುದಾಯದಲ್ಲಿ ಜಾಗೃತಿಗಾಗಿ ಭಾನುವಾರದಿಂದ ಐಎಂಎ ಗ್ರಾಮೀಣ ಭಾಗಕ್ಕೆ ತೆರಳಿ ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಲಾಗುತ್ತದೆ. ಜಿಲ್ಲಾಡಳಿತದ ಜತೆ ಸಂಘ ದಿನದ 24 ತಾಸು ಕೆಲಸ ಮಾಡಲಿದೆ. ಸೋಂಕು ಹರಡದಂತೆ ಎಚ್ಚರ ವಹಿಸುವುದು ಕೇವಲ ಅಧಿಕಾರಿಗಳ, ವೈದ್ಯರ ಕೆಲಸವಲ್ಲ, ಇಡೀ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಭಗವಂತ ಅನವಾರ, ಡಾ.ಪ್ರಶಾಂತ ಭಾಸುತ್ಕರ್, ಡಾ.ಎಚ್. ಹೊನಗುಂಟಿ, ಡಾ.ವಿಜಯಕುಮಾರ, ಡಾ.ರಾಜೇಂದ್ರ ಇದ್ದರು.